February 23, 2019
Prajanudi
ರಾಜಕೀಯ

ಹುಬ್ಬಳ್ಳಿಯಲ್ಲಿ ನಡೆದ ಮೋದಿ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಲಿಲ್ಲ: ಸಿಎಂ ಕುಮಾರಸ್ವಾಮಿ


ಬೆಂಗಳೂರು: ಹುಬ್ಬಳ್ಳಿ-ಧಾರವಾಡದಲ್ಲಿ ನಡೆದ ಪ್ರಧಾನ ಮಂತ್ರಿಯವರ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿಲ್ಲ. ಕೇಂದ್ರದ ಮೋದಿ ಸರ್ಕಾರ ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.ಹುಬ್ಬಳ್ಳಿ-ಧಾರವಾಡದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿನ್ನೆ ಆಗಮಿಸಿದ್ದರು. ನಂತರ ಅವರು ಲೋಕಸಭೆ ಚುನಾವಣೆಗೆ ಪ್ರಚಾರ ಕಾರ್ಯವನ್ನು ಆರಂಭಿಸಿ ಹುಬ್ಬಳ್ಳಿಯ ಕೆಎಲ್ಇ ಮೈದಾನದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು.ಈ ಕುರಿತು ನಿನ್ನೆ ಪ್ರಧಾನಿ ಮೋದಿ ಹುಬ್ಬಳ್ಳಿಗೆ ಬಂದಿಳಿಯುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಇದುವರೆಗೆ ನನಗೆ ಪ್ರಧಾನ ಮಂತ್ರಿ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನ ಬಂದಿಲ್ಲ. ಕೇಂದ್ರದ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಶೇಕಡಾ 50ರಷ್ಟು ಹಣ ಮತ್ತು ಭೂಮಿಯನ್ನು ನೀಡಿದೆ. ಆದರೂ ನನಗೆ ಆಹ್ವಾನ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಪ್ರಧಾನ ಮಂತ್ರಿ ಮೋದಿಯವರ ಕ್ಷುಲ್ಲಕ ರಾಜಕಾರಣದ ಬಗ್ಗೆ ನಾವು ಬೊಟ್ಟು ಮಾಡಿ ಹೇಳಬೇಕಾದ ಅಗತ್ಯವಿಲ್ಲ. ಬಿಜೆಪಿ ಪಕ್ಷದ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ನಮ್ಮ ಅಭ್ಯಂತರವಾಗಲಿ, ಆಕ್ಷೇಪವಾಗಲಿ ಇಲ್ಲ. ಆದರೆ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಮುಖ್ಯಮಂತ್ರಿಯನ್ನು ಆಹ್ವಾನಿಸುವ ಕನಿಷ್ಠ ಸೌಜನ್ಯ ಕೂಡ ಅವರಿಗಿಲ್ಲ, ಅಗ್ಗದ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡ ಕಟ್ಟಡಕ್ಕೆ ಶಂಕುಸ್ಥಾಪನೆ, ಅನಿಲ ಪೈಪ್ ಲೈನ್ ಯೋಜನೆಗೆ ಶಂಕುಸ್ಥಾಪನೆ ಇತ್ಯಾದಿಗಳಿಗೆ ಮೋದಿ ಹುಬ್ಬಳ್ಳಿಗೆ ಆಗಮಿಸಿ ನಂತರ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಹುಬ್ಬಳ್ಳಿಯಿಂದಲೇ ಚುನಾವಣಾ ಪ್ರಚಾರ ಕೈಗೊಂಡರು. ಇನ್ನು ಇದೇ ತಿಂಗಳ 19 ಮತ್ತು 27ರಂದು ಮತ್ತೆರಡು ಬಾರಿ ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ.ಮೋದಿಯವರ ಕಾರ್ಯಕ್ರಮಕ್ಕೆ ಸಿಎಂ ಕುಮಾರಸ್ವಾಮಿಯವರನ್ನು ಆಹ್ವಾನಿಸದಿರುವುದು ರಾಜ್ಯದ ಜನತೆಗೆ ಮಾಡಿರುವ ಅವಮಾನ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಕರ್ನಾಟಕ ಸರ್ಕಾರ 500 ಎಕರೆ ಭೂಮಿಯನ್ನು ನೀಡಿದ್ದರೂ ಸಹ ಧಾರವಾಡದಲ್ಲಿ ಐಐಟಿ ಸ್ಥಾಪನೆಯ ಲಾಭ ತಮಗೆ ಸಿಗಬೇಕೆಂದು ಬಿಜೆಪಿ ಹವಣಿಸುತ್ತಿದೆ ಎಂದು ಆರೋಪಿಸಿದರು.

Related posts

ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ಕೇವಲ ಗಿಮಿಕ್: ಯಡಿಯೂರಪ್ಪ

Prajanudi Admin

ಕರ್ನಾಟಕದಲ್ಲಿಯೂ ಪ್ರಿಯಾಂಕಾ ಚುನಾವಣಾ ಪ್ರಚಾರ ಖಚಿತ: ರಾಜ್ಯ 'ಕೈ'ನಾಯಕರ ಭರವಸೆ

Prajanudi Admin

ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆ: ಅತೃಪ್ತ ಶಾಸಕರಿಗೆ ಮತ್ತೆ ನೋಟಿಸ್ ಜಾರಿ

Prajanudi Admin

Leave a Comment