Prajanudi
ಅಂಕಣ

ಲಾಭ-ನಷ್ಟದ ಲೆಕ್ಕಾಚಾರ ಬಿಟ್ಟು ಪಾಕಿಸ್ತಾನಕ್ಕೆ ನೀಡಬೇಕಿದೆ ನೇರ ಉತ್ತರ!


ಯುದ್ಧವಿರಬಹದು ಅಥವಾ ಪೂರ್ಣ ಪ್ರಮಾಣದ ಯುದ್ಧವಲ್ಲದೆ ಸ್ಟ್ರಾಟರ್ಜಿಕಲ್ ಸ್ಟ್ರೈಕ್ (ಸರ್ಜಿಕಲ್ ಸ್ಟ್ರೈಕ್) ಇರಬಹದು ಇಂತಹ ವಿಷಯಗಳು ಜನರ ಗಮನವನ್ನು ಬಹುಬೇಗ ತನ್ನೆಡೆಗೆ ಆಕರ್ಷಿಸುತ್ತದೆ. ನೆರೆಯ ಪಾಕಿಸ್ತಾನ ತನ್ನ ಹುಟ್ಟಿನ ದಿನದಿಂದ ಇಂದಿನವರೆಗೆ ಭಾರತಕ್ಕೆ ಕಾಟ ಕೊಡುತ್ತಲೇ ಬಂದಿದೆ. ಭಾರತದ ಅಲಿಪ್ತ ನೀತಿ ಧೋರಣೆ ಎಲ್ಲಿಯವರೆಗೆ ವ್ಯವಸ್ಥೆಯಲ್ಲಿ ಬೇರು ಬಿಟ್ಟಿತ್ತೆಂದರೆ ಶತ್ರು ನಮ್ಮ ದೇಶದ ಮೇಲೆ ದಾಳಿ ಮಾಡಿದಾಗ ಕೂಡ ಅದನ್ನ ಮಾತಿನಲ್ಲಿ ಖಂಡಿಸಿ ವಿಷಯವನ್ನ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಳಲು ತೋಡಿಕೊಳ್ಳುವ ಮಟ್ಟಕ್ಕೆ ಸೀಮಿತವಾಗುವಷ್ಟು. ದೇಶದಲ್ಲಿ 2014 ರಲ್ಲಿ ಬದಲಾದ ನಾಯಕತ್ವ ಭಾರತವನ್ನ ವಿಶ್ವ ಮಟ್ಟದಲ್ಲಿ ಬೇರೆಯ ದೃಷ್ಟಿಯಲ್ಲಿ ನೋಡುವಂತೆ ಮಾಡಿದೆ. ಪಾಕಿಸ್ತಾನ ಪುಲ್ವಾಮ ಮೇಲೆ ಮಾಡಿದ ದಾಳಿಗೆ ಭಾರತ ಉತ್ತರ ನೀಡಿದೆ. ಭಾರತದಾದ್ಯಂತ ಒಂದು ರೀತಿಯ ಸಡಗರ ಆವರಿಸಿದೆ. ಸ್ವಾತಂತ್ರ್ಯ ಬಂದ ದಿನದಿಂದ ಇಲ್ಲಿಯವರೆಗೆ ಪಾಕಿಸ್ತಾನ ಮಾಡುವ ಇಂತಹ ಕುಚೇಷ್ಟೆಗಳಿಗೆ ಭಾರತ ತಕ್ಕ ಉತ್ತರ ಕೊಟ್ಟಿರಲಿಲ್ಲ. ನಮ್ಮ ಸೇನೆ ಕೂಡ ಕೋಪದಿಂದ ತನಗಾದ ನಷ್ಟ ಮತ್ತು ಅವಮಾನವನ್ನ ಇಷ್ಟು ದಿನ ಸಹಿಸಿಕೊಂಡು ಬಂದಿತ್ತು. ಇದೀಗ ಭಾರತದ ಜನತೆ ಮತ್ತು ಸೈನ್ಯ ಎರಡೂ ಹಿಂದಿನ ನೋವು, ಅಪಮಾನ ಮರೆತು ವಿಜಯ ದಿವಸವನ್ನ ಆಚರಿಸುತ್ತಿವೆ. ಇಂತಹ ಸ್ಥಿತಿ ಭಾರತಕ್ಕೆ ಒಂದೇ ದಿನದಲ್ಲಿ ಬರಲಿಲ್ಲ! ಇದರ ಹಿಂದೆ ವ್ಯವಸ್ಥಿತ ಯೋಜನೆ ಮತ್ತು ಆ ಯೋಜನೆಯನ್ನ ಕರಾರುವಕ್ಕಾಗಿ ಕಾರ್ಯಗತಗೊಳಿಸಿದ ತಂಡವಿದೆ. ಹಣದ ಬಲವಿಲ್ಲದೆ ಅಥವಾ ಆರ್ಥಿಕ ಸದೃಢತೆಯಿಲ್ಲದಿದ್ದರೆ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳ ಕಷ್ಟ. ಭಾರತ ವಿಶ್ವ ಮಟ್ಟದಲ್ಲಿ ಇಂದಿನ ಸ್ಥಿತಿ ತಲುಪಲು ಮಾಡಿದ ಕಸರತ್ತು ತಿಳಿದುಕೊಳ್ಳೋಣ. ಗಮನಿಸಿ ಇಲ್ಲಿ ಕೇವಲ ನಮ್ಮ ಆರ್ಥಿಕತೆಯಷ್ಟೇ ಪ್ರಮುಖವಾಗುವುದಿಲ್ಲ ಜೊತೆಗೆ ಬೇರೆ ದೇಶಗಳ ಆರ್ಥಿಕ ಸ್ಥಿತಗತಿ ಕೂಡ ಮುಖ್ಯವಾಗುತ್ತದೆ. ವಿದೇಶಿ ಪ್ರವಾಸ, ವ್ಯಾಪಾರ ವೃದ್ಧಿ ಮತ್ತು ಹೂಡಿಕೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿದೇಶಿ ಪ್ರಯಾಣವನ್ನ ನಮ್ಮಲ್ಲಿ ಲೇವಡಿ ಮಾಡಿ ನಕ್ಕವರ ಸಂಖ್ಯೆ ಬಹಳವಿದೆ. ಆದರೆ ಗಮನಿಸಿ ನೋಡಿ ನರೇಂದ್ರ ಮೋದಿಯವರು ಮಾಡಿದ ಎಲ್ಲಾ ಪ್ರವಾಸಗಳು ಭಾರತಕ್ಕೆ ವ್ಯಾಪಾರ ವೃದ್ಧಿಸುವುದರಲ್ಲಿ ಸಹಾಯ ಮಾಡಿವೆ. ಇದು ಕೇವಲ ವ್ಯಾಪಾರಕ್ಕೆ ಅಷ್ಟೇ ಸೀಮಿತವಾಗಿಲ್ಲ. ಭಾರತ, ಆ ದೇಶಗಳೊಂದಿಗೆ ವಿದೇಶಿ ವಿನಿಮಯ ಒಪ್ಪಂದ ಮಾಡಿಕೊಂಡಿದೆ, ಹಲವು ದೇಶಗಳೊಂದಿಗೆ ರೂಪಾಯಿಯಲ್ಲಿ ಹಣವನ್ನ ನೀಡುವ ಒಪ್ಪಂದ ಕೂಡ ಮಾಡಿಕೊಂಡಿದೆ. ಇದರ ಜೊತೆಗೆ ಬಹುತೇಕ ಸಣ್ಣ ಪುಟ್ಟ ರಾಷ್ಟ್ರಗಳಲ್ಲಿ ಭಾರತ ಹೂಡಿಕೆ ಮಾಡಿದೆ. ನಮಗಿಂತ ಸದೃಢ ದೇಶಗಳನ್ನ ನಮ್ಮಲ್ಲಿ ಹೂಡಿಕೆ ಮಾಡುವಂತೆ ಮಾಡಿದೆ. ಇದರಿಂದ ಭಾರತದ ಬಾಂಧವ್ಯ ಈ ಎಲ್ಲಾ ದೇಶಗಳ ನಡುವೆ ಬಹಳ ಉತ್ತಮವಾಗಿದೆ. ಚೀನಾ ದೇಶವೇಕೆ ಪಾಕಿಸ್ತಾನವನ್ನ ಬೆಂಬಲಿಸುತ್ತದೆ? ಉತ್ತರ ಬಹಳ ಸುಲಭ. ಚೀನಾ ದೇಶ ಪಾಕಿಸ್ತಾನದಲ್ಲಿ ಬಹಳಷ್ಟು ಹಣವನ್ನ ಹೂಡಿಕೆ ಮಾಡಿದೆ. ಇನ್ನಷ್ಟು ಹಣವನ್ನ ಸಾಲದ ರೂಪದಲ್ಲಿ  ನೀಡಿದೆ. ಅರ್ಥ ಬಹಳ ಸರಳ, ಚೀನಾಕ್ಕೆ ತನ್ನ ಲಾಭದ ಚಿಂತೆ ಜೊತೆಗೆ ತನ್ನ ಸಾಮ್ರಾಜ್ಯ ವಿಸ್ತರಿಸುವಲ್ಲಿ ಪಾಕಿಸ್ತಾನದ ಅವಶ್ಯಕತೆ ಇದೆ. ಇದೀಗ ಭಾರತ ಪಾಕಿಸ್ತಾನದ ಮೇಲೆ ಮಾಡಿರುವ ಆಕ್ರಮಣ ಚೀನಾ ದೇಶಕ್ಕೆ ನುಂಗಲಾರದ ಬಿಸಿ ತುಪ್ಪ. ಅದು ಎರಡೂ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎನ್ನುವ ಹೇಳಿಕೆ ನೀಡಿದೆ. ಇದು ಕೇವಲ ತೋರಿಕೆ ಮಾತುಗಳು. ಸದ್ಯಕ್ಕೆ ನೇರ ಯುದ್ಧ ಮಾಡುವುದು ಮತ್ತು ದಕ್ಷಿಣ ಏಷ್ಯಾದಲ್ಲಿ ಅಸ್ಥಿರತೆ ಹೆಚ್ಚಾಗುವುದು ಚೀನಾದ ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಅದು ಅಮೆರಿಕಾ ಜೊತೆಗಿನ ತನ್ನ ವಾಣಿಜ್ಯ ಕಾದಾಟದಲ್ಲಿ ಸಾಕಷ್ಟು ಬಸವಳಿದಿದೆ. ಅಂದರೆ ಶಾಂತಿ ಮಂತ್ರ ಪಠಿಸುವ ಹಿಂದಿನ ಉದ್ದೇಶ ಹಣ ಮತ್ತು ಲಾಭ ನಷ್ಟದ ಲೆಕ್ಕಾಚಾರ ಬಿಟ್ಟು ಬೇರೇನೂ ಅಲ್ಲ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿರುವ ಭಾರತದ ಘನತೆಯ ಮುಂದೆ ನೇರವಾಗಿ ಭಾರತವನ್ನ ಹೀಗಳೆಯಲಾಗದ ಚೀನಾದ ಸ್ಥಿತಿ ಕೂಡ ಕಾರಣ. ಇದರರ್ಥ ಸದ್ಯದ ಮಟ್ಟಿಗೆ ನೇರ ಯುದ್ಧ ಆಗುವ ಸಾಧ್ಯತೆಗಳು ಬಹಳ ಕಡಿಮೆ ಅಂತಾಯ್ತು.ಪಾಕಿಸ್ತಾನ ಹೇಳಿಕೇಳಿ ಮೊದಲೇ ದಿವಾಳಿ ದೇಶ ನೀರಲ್ಲಿ ಇಳಿದವನಿಗೆ ಮಳೆಯಾದರೇನು ಚಳಿಯಾದರೇನು? ‘ಎನ್ನುವ ಗಾದೆಯಂತೆ ಒಂದು ವೇಳೆ ಭಾರತದ ಮೇಲೆ ಯುದ್ಧಕ್ಕೆ ಶುರು ಮಾಡಿದರೆ?? ಎನ್ನುವ ಪ್ರಶ್ನೆಗೆ ಉತ್ತರ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸಗಳು ಹಾಗೂ ಪ್ರಬಲ ವಿದೇಶಾಂಗ ನೀತಿ. ಗಮನಿಸಿ ನೋಡಿ ಹಾಗೊಮ್ಮೆ ಯುದ್ಧವಾದರೆ ಇಲ್ಲಿಯೂ ಯಾರು ಯಾರನ್ನ ಬೆಂಬಲಿಸುತ್ತಾರೆ ಎನ್ನುವುದು ಕೂಡ ಲಾಭ-ನಷ್ಟದ ಲೆಕ್ಕಾಚಾರದ ಆಧಾರದಲ್ಲಿಯೇ ನಡೆಯುತ್ತದೆ. ಚೀನಾ ಸಹಜವಾಗೇ ತನ್ನ ಹೂಡಿಕೆಯನ್ನ, ತನ್ನ ಸ್ವಹಿತ ಕಾಯ್ದುಕೊಳ್ಳಲು ಪಾಕಿಸ್ತಾನವನ್ನ ಬೆಂಬಲಿಸುತ್ತದೆ. ಜಗತ್ತಿನ ಉಳಿದ ಬಲಿಷ್ಠ ರಾಷ್ಟ್ರಗಳ ಕಥೆಯೇನು? ರಷ್ಯಾ ಮತ್ತು ಅಮೆರಿಕಾ ಲಾಭವಿಲ್ಲದೆ ದೈತ್ಯ ಚೀನಾ ದೇಶವನ್ನ ನೇರವಾಗಿ ವಿರೋಧಿಸುವುದಿಲ್ಲ. ಚೀನಾ ದೇಶ ತನ್ನ ರಫ್ತನ್ನು ನಿಲ್ಲಿಸಿದರೆ ಅದರ ಆರ್ಥಿಕತೆ ಕೆಡುತ್ತದೆ ಜೊತೆಗೆ ಅಮೆರಿಕಾ ಕೂಡ ಬೀದಿಗೆ ಬರುತ್ತದೆ. ಈ ಎರಡು ದೇಶಗಳ ನಡುವಿನ ಹಣಕಾಸು ವ್ಯವಹಾರ ಅತ್ಯಂತ ಕ್ಲಿಷ್ಟವಾಗಿದೆ. ರಷ್ಯಾದ ಕೂಡ ಅವಕಾಶವಾದಿ ದೇಶ. ಅದು ಭಾರತದ ಉತ್ತಮ ಮಿತ್ರದೇಶ ಎನ್ನುವುದು ಮಾಧ್ಯಮಗಳು ಇಲ್ಲಿಯವರೆಗೆ ಪೋಷಿಸಿಕೊಂಡು ಬಂದಿರುವ ಹಸಿ ಸುಳ್ಳು… ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ರಷ್ಯಾ ಅತಿ ಕಡಿಮೆ ಬೆಲೆಯಲ್ಲಿ ನಮ್ಮ ಲೋಹಗಳನ್ನ ಬಹಳಷ್ಟು ವರ್ಷ ತಿಂದು ತೇಗಿದೆ. ಅದು ಮಿತ್ರ ರಾಷ್ಟ್ರವಾಗಿದ್ದು ಲಾಭದ ಲೆಕ್ಕಾಚಾರಲ್ಲಿ ಮಾತ್ರ. ಇರಲಿ. ಸರಳವಾಗಿ ಹೇಳಬೇಕಂದರೆ ಸಾಕಷ್ಟು ಪ್ರಮಾಣದಲ್ಲಿ ಲಾಭವಿಲ್ಲದೆ ರಷ್ಯಾ ಮತ್ತು ಅಮೆರಿಕಾ ದೇಶಗಳು ಚೀನಾ ವಿರುದ್ಧ ಹೋಗುವುದಿಲ್ಲ. ಅವು ತಟಸ್ಥವಾಗಬಹದು. ಹೀಗಾದಾಗ ಚೀನಾ ಮತ್ತು ಪಾಕಿಸ್ತಾನದ ಮುಂದೆ ಭಾರತದ ಆಟ ಹೆಚ್ಚು ನೆಡೆಯುವುದಿಲ್ಲ. ಇಂತಹ ಪರಿಸ್ಥಿತಿ ಎದುರಾದರೆ ಏನು ಮಾಡುವುದು? ಇಲ್ಲಿ ಸಹಾಯಕ್ಕೆ ಬರುವುದು ನರೇಂದ್ರ ಮೋದಿಯವರ ವಿದೇಶಿ ಪ್ರವಾಸ ಮತ್ತು ಅವರ ವಿದೇಶಾಂಗ ನೀತಿಗಳು. ಪ್ರಧಾನಮಂತ್ರಿ ಮೋದಿ ಹಿಂದಿನ ವಿದೇಶಿ ಪ್ರವಾಸ ಯುದ್ಧದ ಸಮಯದಲ್ಲಿ ಹೇಗೆ ಸಹಾಯ ಮಾಡುತ್ತದೆ? ಗಮನಿಸಿ ಚೀನಾ ದೇಶಕ್ಕೆ ಸರಹದ್ದು ಹಂಚಿಕೊಂಡಿರುವ ದೇಶಗಳು ಹದಿನಾಲ್ಕು. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ಕೂಡ ಸೇರಿದೆ. ಇವೆರಡು ದೇಶಗಳನ್ನ ಹೊರತುಪಡಿಸಿದರೆ ಉಳಿಯುವುದು ಹನ್ನೆರಡು. ಆಫ್ಘಾನಿಸ್ತಾನ, ಕೈರೇಗಿಸ್ತಾನ, ಕಜಕಿಸ್ಥಾನ, ತಜಿಕಿಸ್ತಾನ, ಮಂಗೋಲಿಯಾ, ರಷ್ಯಾ, ನಾರ್ತ್ ಕೊರಿಯಾ, ವಿಯೆಟ್ನಾಮ್, ಲಾವೋಸ್, ಮಯನ್ಮಾರ್, ಭೂತಾನ್ ಮತ್ತು ನೇಪಾಳ ಆ ದೇಶಗಳು. ಭಾರತ ಈ ಎಲ್ಲಾ ದೇಶಗಳೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದೆ. ಈ ಎಲ್ಲಾ ದೇಶಗಳೂ ಒಂದಲ್ಲ ಒಂದು ಕಾರಣದಿಂದ ಚೀನಾ ದೇಶದೊಂದಿಗೆ ಉತ್ತಮ ಸಾಮರಸ್ಯ ಹೊಂದಿಲ್ಲ. ಈ ಹನ್ನೆರಡು ದೇಶಗಳಲ್ಲಿ ಬಹಳಷ್ಟು ದೇಶಗಳಿಗೆ ಭಾರತ ಬಹಳಷ್ಟು ದೇಣಿಗೆ ನೀಡಿದೆ. ಅವೆಲ್ಲವೂ ಭಾರತದಿಂದ ಉಪಕೃತವಾದ ದೇಶಗಳು. ರಷ್ಯಾ ಮತ್ತು ನಾರ್ತ್ ಕೊರಿಯಾ ತಟಸ್ಥವಾದರೂ ಉಳಿದ ದೇಶಗಳು ಭಾರತದ ಬೆನ್ನಿಗೆ ನಿಲ್ಲುತ್ತವೆ. ಅವು ಚೀನಾಗೆ ಸಾಕಷ್ಟು ತಲೆನೋವು ನೀಡುವ ಜಾಗಗಳಲ್ಲಿ ಚೀನಾಕ್ಕೆ ಹೊಡೆಯುವ ಶಕ್ತಿ ಹೊಂದಿವೆ. ಉಳಿದಂತೆ ಚೀನಾ ದೇಶಕ್ಕೆ ಸರಹದ್ದು ಹೊಂದಿಲ್ಲದಿದ್ದರೂ, ಗಾತ್ರದಲ್ಲಿ ಚಿಕ್ಕದಾದರೂ ಚೀನಾ ದೇಶವನ್ನ ಅಲ್ಲಾಡಿಸುವ ಶಕ್ತಿ ಇರುವ ಪುಟ್ಟ ಜಪಾನ್ ಭಾರತದ ನೆಲದಲ್ಲಿ ಸಾಕಷ್ಟು ಹೂಡಿಕೆ ಮಾಡಿದೆ. ಇತ್ತೀಚೆಗಷ್ಟೇ ಭಾರತೀಯ ರೂಪಾಯಿ ಮತ್ತು ಜಪಾನೀ ಯೆನ್ ನಡುವೆ ವಹಿವಾಟು ನಡೆಸುವ ಸಹಸ್ರಾರು ಕೋಟಿ ರೂಪಾಯಿ ಒಪ್ಪಂದ ಕೂಡ ನಡೆದಿದೆ. ಭಾರತ ಸೋಲುವುದು ಅಥವಾ ಅಸ್ಥಿರ ಭಾರತ ಜಪಾನ್ ದೇಶಕ್ಕೆ ಲಾಭದಾಯಕವಲ್ಲ. ಹೀಗಾಗಿ ಜಪಾನ್ ಎರಡನೇ ಯೋಚನೆಯಿಲ್ಲದೆ ಭಾರತಕ್ಕೆ ಬೆಂಬಲ ಘೋಷಿಸುತ್ತದೆ. ಇಸ್ರೇಲ್ ದೇಶ ಕೂಡ ಭಾರತದೊಂದಿಗೆ ಬಹಳಷ್ಟು ವ್ಯಾಪಾರ ವಹಿವಾಟು ಹೊಂದಿದೆ. ಇದೊಂದು ದೇಶ ಮಾತ್ರ ವ್ಯಾಪಾರವನ್ನೂ ಮೀರಿ ಭಾರತದೊಂದಿಗೆ ಭಾವುಕತೆಯಿಂದ ಬೆಸೆದುಕೊಂಡಿದೆ. ಪುಲ್ವಾಮ ದಾಳಿಯಾದ ಕೆಲವೇ ಗಂಟೆಗಳಲ್ಲಿ ನೀವು ಮುನ್ನುಗ್ಗಿ ಜೊತೆಗೆ ನಾವಿದ್ದೇವೆ ಎನ್ನುವ ಸಂದೇಶವನ್ನು ಅಲ್ಲಿಯ ಪ್ರಧಾನಿ ಮುಕ್ತವಾಗಿ ಹೇಳಿರುವುದು ಇದಕ್ಕೊಂದು ಉದಾಹರಣೆ. ಫ್ರಾನ್ಸ್ ಮೂಲಭೂತ ಇಸ್ಲಾಂವಾದದಿಂದ ಸಾಕಷ್ಟು ಹಾನಿಗೊಳಗಾಗಿದೆ. ಭಾರತದ ನೋವನ್ನು ಅದು ಕೂಡ ಅನುಭವಿಸಿದೆ. ಹೀಗಾಗಿ ಭಾರತೀಯ ವಾಯುಸೇನೆ ನೀಡಿದ ಉತ್ತರಕ್ಕೆ ಫ್ರಾನ್ಸ್ ಅದಾಗಲೇ ಮುಕ್ತ ಬೆಂಬಲ ವ್ಯಕ್ತಪಡಿಸಿದೆ. ಮುಂದೇನು? ಪಾಕಿಸ್ತಾನ ಸುಮ್ಮನೆ ಕೂರುವುದಿಲ್ಲ ಅದು ನೇರವಾಗಿ ಯುದ್ಧ ಮಾಡದಿದ್ದರೂ ಪರೋಕ್ಷವಾಗಿ ಭಾರತಕ್ಕೆ ಹಾನಿ ಮಾಡಲು ಏನಾದರೂ ಖಂಡಿತ ಮಾಡುತ್ತದೆ. ಇದು ಕೊನೆಯಾಗದ ಸಮಸ್ಯೆ. ಅವರು ನಮ್ಮ ಮೇಲೆ ಆಕ್ರಮಣ ಮಾಡಿದಾಗ ಪಾಪಿಸ್ತಾನ ಎಂದು ಕೂಗುವುದು ನಾವು ಅವರನ್ನ ಹೊಡೆದಾಗ ಯುದ್ಧ ಗೆದ್ದವರಂತೆ ಸಂಭ್ರಮಿಸುವುದು ಎಷ್ಟು ದಿನ ನೆಡೆಯಲು ಸಾಧ್ಯ.? ಪಾಕಿಸ್ತಾನ ಮತ್ತು ಚೀನಾ ದೇಶಕ್ಕೆ ಸದ್ಯದ ಸಮಯದಲ್ಲಿ ಯುದ್ಧ ಬೇಕಿಲ್ಲ. ಯುದ್ಧ ಆರ್ಥಿಕತೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಆದರೆ ದಿನ ನಿತ್ಯ ಆಗುವ ಈ ಕಿರಿಕಿರಿಯಿಂದ ಮುಕ್ತಿ ಪಡೆದರೆ ನಂತರ ಅಭಿವೃದ್ಧಿ ಪಥದಲ್ಲಿ ವೇಗವಾಗಿ ಹೋಗಬಹದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂದು ಭಾರತಕ್ಕೆ ಹಿಂದೆಂದೂ ಇಲ್ಲದ ಬೆಂಬಲ ಮತ್ತು ಗೌರವ ಎರಡೂ ಇದೆ. ಇದನ್ನ ಬಳಸಿಕೊಂಡು ರಷ್ಯಾ ಮತ್ತು ಅಮೆರಿಕಾ ದೇಶಗಳ ಬೆಂಬಲ ಪಡೆದು ಪಾಕಿಸ್ತಾನದ ಮತ್ತು ಚೀನಾದ ಉದ್ಧಟತನವನ್ನ ಕನಿಷ್ಟ ಇನ್ನೊಂದೆರಡು ಅಥವಾ ಮೂರು ದಶಕ ಅಡಗಿಸಲು ಇದು ಸಕಾಲ.ಈ ಕಸರತ್ತಿನಲ್ಲಿ ಭಾರತದ ಆರ್ಥಿಕತೆ ಬಹಳಷ್ಟು ಹದಗೆಡುವುದು ಅತ್ಯಂತ ಸ್ಪಷ್ಟ. ಒಪ್ಪೊತ್ತು ಊಟ ಮಾಡಿದರೂ ಸರಿ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿ ಸಾಕು ಎನ್ನುವ ಜನತೆ ಜೊತೆಗಿರುವಾಗ ಕೇವಲ ಹಣಕಾಸು, ಲಾಭ ನಷ್ಟದ ಲೆಕ್ಕಾಚಾರ ಕೆಲಸ ಮಾಡುವುದಿಲ್ಲ. ದೇಶದ ಭದ್ರತೆ ಮತ್ತು ಮಾನ-ಸಮ್ಮಾನದ ವಿಷಯ ಬಂದಾಗ ಆರ್ಥಿಕತೆ ಒಳಗೊಂಡು ಎಲ್ಲವೂ ಗೌಣ. ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುಂದಿನ ನಡೆ ಏನಿರಬಹದು ಎನ್ನುವುದು ಕುತೂಹಲ… – ರಂಗಸ್ವಾಮಿ ಮೂಕನಹಳ್ಳಿmuraram@yahoo.com

– ರಂಗಸ್ವಾಮಿ ಮೂಕನಹಳ್ಳಿmuraram@yahoo.com

Related posts

ಡೀಲ್ ಯಾ ನೋ ಡೀಲ್? ಬಂದೆ ಬಿಡ್ತು ಬ್ರೆಕ್ಸಿಟ್ ಫಲಿತಾಂಶದ ದಿನ!

Prajanudi Admin

ಅಭದ್ರತೆ, ಅವಿಶ್ವಾಸ, ಅಪನಂಬಿಕೆ ಸೃಷ್ಟಿಸಿದೆ ಸಾವಿರಾರು ಕೋಟಿ ಶಸ್ತ್ರಾಸ್ರ ವಹಿವಾಟು!

Prajanudi Admin

ಚೀನಾದ ಸಾಲದ ಖೆಡ್ಡಾದಲ್ಲಿ ಶ್ರೀಲಂಕಾ, ಎಲ್ ಟಿಟಿಇ ನಂತರ ಹೊಸ ಆತಂಕ!

Prajanudi Admin

Leave a Comment