Prajanudi
ದೇಶ ನ್ಯೂಸ್

ಸಿಬಿಐ ಮುಖ್ಯಸ್ಥರಿಗೆ ಕಡ್ಡಾಯ ರಜೆ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್


ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ವರ್ಮಾ ಹಾಗೂ ಎನ್ ಜಿಒವೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಕಾಯ್ದಿರಿಸಿದೆ.

ಸಿಬಿಐ ಮುಖ್ಯಸ್ಥರ ವಿರುದ್ಧ ಯಾವುದೇ ಕ್ರಮಕೈಗೊಳ್ಳುವ ಮುನ್ನ ನೇಮಕಾತಿ ಸಮಿತಿಯನ್ನು ಸಂಪರ್ಕಿಸಿ ನಿರ್ಧಾರ ತೆಗೆದುಕೊಳ್ಳುವುದು ನಿಯಮವಾಗಿದೆ. ಆದರೆ ಕೇಂದ್ರ ಸರ್ಕಾರ ಈ ನಿಯಮವನ್ನು ಉಲ್ಲಂಘಿಸಿ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಪರ ವಕೀಲರು ವಾದಿಸಿದರು.

ನೇಮಕಾತಿ ಸಮಿತಿಯ ಅನುಮೋದನೆಯ ನಂತರವಷ್ಟೇ ಸಿಬಿಐ ನಿರ್ದೇಶಕರನ್ನು ಅವರ ಸ್ಥಾನದಿಂದ ತೆರವುಗೊಳಿಸಲು ಅವಕಾಶವಿದೆ ಎಂದು ಅಲೋಕ್ ವರ್ಮಾ ಪರ ವಕೀಲ ಫಾಲಿ ನಾರಿಮನ್ ಅವರು ವಾದಿಸಿದರು.

ನಿನ್ನೆ ಸರ್ಕಾರದ ಪರ ವಾದ ಮಂಡಿಸಿದ್ದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು, ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ಥಾನ ಅವರು ಕಳೆದ ಕೆಲ ತಿಂಗಳಿಂದ ಬೆಕ್ಕುಗಳ ರೀತಿ ಕಿತ್ತಾಡುತ್ತಿದ್ದರು. ಈ ಕಾರಣದಿಂದ ಉಂಟಾದ ಪರಿಸ್ಥಿತಿ ನಿರ್ವಹಿಸಲು ಸರ್ಕಾರ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸುವ ನಿರ್ಧಾರ ತೆಗೆದುಕೊಂಡಿದೆ ಎಂದು ಸಮರ್ಥಿಸಿಕೊಂಡಿದ್ದರು.

ವಾದ – ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ನೀವು ಜುಲೈನಿಂದಲೂ ಅವರ ನಡೆಯನ್ನು ಸಹಿಸಿಕೊಂಡಿರುವುದಾದರೆ, ವಿಷಮ ಪರಿಸ್ಥಿತಿಗೆ ದಿಢೀರ್ ಕ್ರಮದ ಅವಶ್ಯಕತೆ ಇರುವುದಿಲ್ಲ ಎಂದರು. ಅಲ್ಲದೆ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದಾರೆ.

ಸಿಬಿಐ ನಿರ್ದೇಶಕ ಹಾಗೂ ವಿಶೇಷ ನಿರ್ದೇಶಕರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳನ್ನೂ ಕೇಂದ್ರ ಸರ್ಕಾರ ರಾತ್ರೋರಾತ್ರಿ ಕಡ್ಡಾಯ ರಜೆ ಮೇಲೆ ಕಳುಹಿಸಿ, ಸಿಬಿಐಗೆ ಹಂಗಾಮಿ ನಿರ್ದೇಶಕರನ್ನಾಗಿ ನಾಗೇಶ್ವರ್​ ರಾವ್ ಅವರನ್ನು ನೇಮಿಸಿದೆ. ಸಿಬಿಐ ನಿರ್ದೇಶಕರ ಕಡ್ಡಾಯ ರಜೆ ಹಾಗೂ ಹಂಗಾಮಿ ನಿರ್ದೇಶಕರ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯರಾತ್ರಿ ತೆಗೆದುಕೊಂಡ ನಿರ್ಧಾರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ರಜೆ ಮೇಲೆ ಇರುವ ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು.

Related posts

ನೇಪಾಳ: ನದಿಗೆ ಉರುಳಿ ಬಿದ್ದ ಮಿನಿ ಟ್ರಕ್ , 18 ದುರ್ಮರಣ , 16 ಮಂದಿಗೆ ಗಾಯ

Prajanudi Admin

ರಾಮ ಮಂದಿರ ನಿರ್ಮಿಸುವಂತೆ ಒತ್ತಾಯ : ಹಿಂದೂ ಸ್ವಾಮೀಜಿಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ !

Prajanudi Admin

ಪಾಕ್ ಪೋಷಣೆಗೆ ಮಾಸ್ಟರ್ ಪ್ಲಾನ್: ಅತ್ಯಾಧುನಿಕ 48 ಮಿಲಿಟರಿ ಡ್ರೋಣ್ ಮಾರಾಟ ಮಾಡಲು ಚೀನಾ ಮುಂದು!

Prajanudi Admin

Leave a Comment