Prajanudi
ಅಂಕಣ

ಐಎಂಎಫ್ ಪ್ರಥಮ ಮಹಿಳಾ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್: ಐಎಂಎಫ್ ವಿಶ್ವಬ್ಯಾಂಕ್ ಗಿಂತ ಹೇಗೆ ಭಿನ್ನ?: ಇಲ್ಲಿದೆ ಮಾಹಿತಿ


ನಮಗೆಲ್ಲಾ ಗೊತ್ತಿರುವಂತೆ ಜಗತ್ತಿನಲ್ಲಿ ಎರಡು ದೊಡ್ಡ ಹಣಕಾಸು ಸಂಸ್ಥೆಗಳಿವೆ. ಒಂದು ವರ್ಲ್ಡ್ ಬ್ಯಾಂಕ್ ಮತ್ತೊಂದು ಐಎಂಎಫ್. ಇವೆರಡರ ನಡುವೆ ಜನರಿಗೆ ಬಹಳಷ್ಟು ಗೊಂದಲವಿದೆ. ನಾವು ಇವೆರಡನ್ನೂ ಒಂದೇ ಎನ್ನುವಷ್ಟು ಇದನ್ನ ಅದಲುಬದಲಾಗಿ ಬಳಸುತ್ತೇವೆ. ಆದರೆ ಇವೆರೆಡು ಬೇರೆ ಬೇರೆ ಸಂಸ್ಥೆಗಳು. ಜಾನ್ ಮಯ್ನಾರ್ಡ್ ಕೇನ್ಸ್ ಇವೆರೆಡು ಸಂಸ್ಥೆಗಳ ಸ್ಥಾಪಕ ಸದಸ್ಯ. ಇಪ್ಪತ್ತನೇ ಶತಮಾನ ಕಂಡ ಮಹಾನ್ ಆರ್ಥಿಕ ತಜ್ಞ ಆತ. ಐಎಂಎಫ್ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಕೂಡ ವರ್ಲ್ಡ್ ಬ್ಯಾಂಕ್ ಮತ್ತು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಸಂಸ್ಥೆಗಳ ನಡುವೆ ಗೊಂದಲ ಉಂಟಾಗಿ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಎನ್ನುವುದರ ಬದಲು ಇಂಟರ್ನ್ಯಾಷನಲ್ ಮಾನಿಟರಿ ಬ್ಯಾಂಕ್ ಎಂದು ಹೆಸರಿಸಿದ ಘಟನೆ ಚರಿತ್ರೆಯಲ್ಲಿ ದಾಖಲಾಗಿದೆ. ಹೀಗೆ ತಿಳಿದವರ ವರ್ಗದಲ್ಲೆ ಇಂತಹ ಆಭಾಸಗಳು ಉಂಟಾಗುತ್ತದೆ ಎನ್ನುವುದಾದರೆ ಇನ್ನು ಜನ ಸಮಾನ್ಯನ ಕಥೆಯೇನು? ಈ ರೀತಿಯ ಒಂದು ಗೊಂದಲ ಉಂಟಾಗಲು ಕಾರಣ ಈ ಎರಡು ಸಂಸ್ಥೆಗಳು ನೆಡೆಸುವ ಕಾರ್ಯಾಗಳು ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ. ಇವುಗಳ ನಡುವಿನ ಅಂತರಕ್ಕಿಂತ ಇವುಗಳ ನಡುವಿನ ಸಾಮ್ಯತೆ ಹೆಚ್ಚಿದೆ. ಹೀಗಾಗಿ ಇವರೆಡು ಅಂಗ ಸಂಸ್ಥೆಗಳೇನೋ ಎನ್ನುವಷ್ಟು ಸಂಶಯ ಜನಮನದಲ್ಲಿದೆ. ಮೊದಲಿಗೆ ವರ್ಲ್ಡ್ ಬ್ಯಾಂಕ್ ಬ್ಯಾಂಕ್ ಬಗ್ಗೆ ಒಂದಷ್ಟು ಮಾಹಿತಿ:ಇದು ಒಂದು ಇನ್ವೆಸ್ಟ್ಮೆಂಟ್ ಬ್ಯಾಂಕ್. ಅಂದರೆ ಠೇವಣಿದಾರರಿಂದ ಹಣ ಪಡೆದು ಬೇಕಾದವರಿಗೆ ಸಾಲ ನೀಡುವುದು ಇದರ ಮುಖ್ಯ ಕೆಲಸ. ಜಗತ್ತಿನ 180 ದೇಶಗಳು ಇಲ್ಲಿ ಖಾತೆ ಹೊಂದಿವೆ. ಯಾವ ದೇಶ ಬೇಕಾದರೂ ಇಲ್ಲಿ ತಮ್ಮ ಹಣವನ್ನ ಠೇವಣಿ ಇರಿಸಬಹುದು. ಹೀಗೆ ಸಂಗ್ರಹವಾದ ಹಣವನ್ನ ಇತರ ದೇಶಗಳಿಗೆ ಅಥವಾ ಕಾರ್ಪೊರೇಟ್ ಸಂಸ್ಥೆಗಳಿಗೆ ಸಾಲದ ರೂಪದಲ್ಲಿ ನೀಡಬಹದು. ಮತ್ತು ಅವರಿಂದ ಅದಕ್ಕೆ ತಕ್ಕ ಬಡ್ಡಿಯನ್ನ ಸಹ ವಸೂಲಿ ಮಾಡಲಾಗುವುದು. ಗಮನಿಸಿ ನೋಡಿ ಇದು ಒಂದು ಸಾಮಾನ್ಯ ಬ್ಯಾಂಕಿನಂತೆ ಕಾರ್ಯ ನಿರ್ವಹಿಸುತ್ತದೆ. ವ್ಯತ್ಯಾಸವೆಂದರೆ ಇಲ್ಲಿನ ಖಾತೆದಾರರು ಜನ ಸಾಮಾನ್ಯರ ಬದಲಿಗೆ ದೇಶಗಳು ಅಷ್ಟೇ. ಉಳಿದಂತೆ ಇಲ್ಲಿ ನಡೆಯುವ ವಹಿವಾಟು, ಕಾರ್ಯ ವೈಖರಿ ಎಲ್ಲಾ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ. ಸಾಲ ಪಡೆಯುವರು ಕೂಡ ಜನ ಸಾಮಾನ್ಯರ ಬದಲಿಗೆ ಬೇರೆ ದೇಶಗಳು ಅಥವಾ ಅತ್ಯಂತ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಾಗಿರುತ್ತದೆ. ಇಲ್ಲಿ ಹಣ ಪಡೆಯುವರು ಮುಖ್ಯವಾಗಿ ಬಡ ಅಥವಾ ಮುಂದುವರಿಯುತ್ತಿರುವ ದೇಶಗಳು ಎಂದು ಹೇಳಬೇಕಾದ ಅವಶ್ಯಕತೆ ಇದೆಯೇ? ಅಂತೆಯೇ ಈ ಬ್ಯಾಂಕಿನ ಆಡಳಿತದಲ್ಲಿ ಇಂಗ್ಲೆಂಡ್ ಮತ್ತು ಅಮೆರಿಕಾದ ಪಾರುಪತ್ಯ ಅತಿ ಹೆಚ್ಚು ಎನ್ನುವ ವಿಷಯ ಕೂಡ ಹೊಸದಾಗಿ ಹೇಳುವಂತಹುದಲ್ಲ. ಐಎಂಎಫ್ ಅಥವಾ ಇಂಟರ್ನಾಷನಲ್ ಮಾನಿಟರಿ ಫಂಡ್: ವರ್ಲ್ಡ್ ಬ್ಯಾಂಕ್ ಹೆಸರೇ ಹೇಳುವಂತೆ ಬ್ಯಾಂಕ್, ಅಲ್ಲಿ ನೆಡೆಯುವುದು ಬ್ಯಾಂಕಿಂಗ್.  ಐಎಂಎಫ್ ಒಂದು ಸಹಕಾರಿ ಒಕ್ಕೊಟವಿದ್ದ ಹಾಗೆ! ಇಲ್ಲಿ ಜಗತ್ತಿನ ಸಕಲ ದೇಶಗಳೂ ತಮ್ಮ ಶಕ್ತಿಗನುಸಾರವಾಗಿ ಒಂದಷ್ಟು ಹಣವನ್ನ ಮೆಂಬರ್ ಶಿಪ್ ಹೆಸರಿನಲ್ಲಿ ಮತ್ತೊಂದಷ್ಟು ಹಣವನ್ನ ದೇಣಿಗೆ ರೂಪದಲ್ಲಿ ನೀಡುತ್ತವೆ. ಹೀಗೆ ಸಂಗ್ರಹವಾದ ಹಣವನ್ನ ಕಷ್ಟದಲ್ಲಿರುವ ದೇಶಕ್ಕೆ ನೀಡಲಾಗುತ್ತದೆ. ಇಲ್ಲಿ ಬಡ ಅಥವಾ ಶ್ರೀಮಂತ ದೇಶ ಎನ್ನುವ ಯಾವುದೇ ವ್ಯತ್ಯಾಸವಿಲ್ಲದೆ ಯಾವುದೇ ದೇಶ ಸಂಕಷ್ಟದಲ್ಲಿರಲಿ ಹಣವನ್ನ ಅವರಿಗೆ ಸಹಾಯವಾಗಿ ನೀಡಲಾಗುತ್ತದೆ. ಐಎಂ ಎಫ್ ನ ಪ್ರಮುಖ ಕಾರ್ಯಗಳನ್ನ ಹೀಗೆ ಪಟ್ಟಿ ಮಾಡಬಹದು ಜಗತ್ತಿನ ಯಾವುದೇ ದೇಶವಿರಲಿ ಅವರ ತಕ್ಷಣದ ಆರ್ಥಿಕ ಸಂಕಷ್ಟಕ್ಕೆ ನೆರವಾಗುವುದು.  ದೇಶ ದೇಶಗಳ ನಡುವೆ ಇರುವ ಅಂತರ ಕಡಿಮೆ ಮಾಡಲು ಶ್ರಮಿಸುವುದು ಅಮೂಲಾಗ್ರವಾಗಿ ಜಗತ್ತಿನ ಬಡತನ ಹೋಗಲಾಡಿಸುವುದು.   ದೇಶ ದೇಶಗಳ ನಡುವೆ ವಿನಿಮಯ ದರ ಹೆಚ್ಚು ಏರುಪೇರಾದಾಗ ಮಧ್ಯ ಪ್ರವೇಶಿಸಿ ಸಮತೋಲನ ಕಾಪಾಡುವುದು. ಜಗತ್ತಿನ ಆರ್ಥಿಕತೆ ಜಾರದಂತೆ ಅದನ್ನ ಕಣ್ಣಿಟ್ಟು ಕಾಯುವುದು. ಹೆಚ್ಚು ಕಡಿಮೆ ಎರಡು ಸಂಸ್ಥೆಗಳ ಉದ್ದೇಶ ಒಂದೇ ಆದರೂ ಐಎಂಎಫ್ ಸಹಕಾರಿ ಅಥವಾ ಸೇವಾ ಭಾವಕ್ಕೆ ಹೆಚ್ಚು ಒಟ್ಟು ನೀಡುತ್ತದೆ. ಹೀಗಾಗಿ ವರ್ಲ್ಡ್ ಬ್ಯಾಂಕಿಗಿಂತ ಭಿನ್ನ ಎಂದು ಹೇಳಬಹದು. ಇಂತಿಪ್ಪ ಐಎಂಎಫ್ ಸಂಸ್ಥೆಯ ಆಡಳಿತ ಮಂಡಳಿಗೆ ಭಾರತದ ರಘುರಾಮ ರಾಜನ್ ಚೀಫ್ ಎಕನಾಮಿಸ್ಟ್ ಆಗಿ ಸೇವೆ ಸಲ್ಲಿಸಿದ್ದರು. ಇವರ ನಂಟು ಕೂಡ ಹಾವರ್ಡ್ ವಿಶ್ವ ವಿದ್ಯಾನಿಲಯದ ಜೊತೆಗಿದೆ. ಇದೆ ತಿಂಗಳು ಅಂದರೆ ಅಕ್ಟೋಬರ್ 1, 2018 ಗೀತಾ ಗೋಪಿನಾಥ್ ಇದೆ ಹುದ್ದೆಗೆ ಆಯ್ಕೆಯಾದ ಎರಡನೇ ಭಾರತೀಯರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಭಾರತೀಯ ಮೂಲದ ಈ ಸ್ಥಾನಕ್ಕೇರಿದ ಪ್ರಥಮ ಮಹಿಳೆ ಎನ್ನುವ ಗರಿಮೆ ಕೂಡ ಆಕೆಯ ಪಾಲಿಗೆ ಸೇರಿದೆ . ಯಾರಿದು ಗೀತಾ ಗೋಪಿನಾಥ್? ಗೀತಾ ಗೋಪಿನಾಥ್ ಹುಟ್ಟಿದ್ದು ಡಿಸೆಂಬರ್ 8 , 1971 ರಲ್ಲಿ ನಮ್ಮ ಮೈಸೂರು ನಗರದಲ್ಲಿ. ಅಪ್ಪ -ಅಮ್ಮ ಮೂಲತಃ ಕೇರಳದವರು. ಪ್ರಾಥಮಿಕ ಶಿಕ್ಷಣ ಕೂಡ ಮೈಸೂರಿನಲ್ಲೇ! ನಂತರ ದೆಹಲಿಯ ಶ್ರೀರಾಮ್ ಕಾಲೇಜಿನಲ್ಲಿ ಪದವಿ ಪಡೆಯುತ್ತಾರೆ ಆ ನಂತರ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಮಾಸ್ಟರ್ ಡಿಗ್ರಿ  ಪಡೆಯುತ್ತಾರೆ. ಅಮೆರಿಕಾದ ಹಾರ್ವಾರ್ಡ್ ವಿಶ್ವವಿದ್ಯಾನಿಲಯದಲ್ಲಿ  ಇಂಟರ್ನ್ಯಾಷನಲ್ ಸ್ಟಡೀಸ್ ಮತ್ತು ಎಕನಾಮಿಕ್ಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಾ ಇದ್ದಾರೆ. ಇದೀಗ ಅಂದರೆ ಅಕ್ಟೋಬರ್ ನಲ್ಲಿ ಐಎಂಎಫ್ ನಲ್ಲಿ ಈಕೆಯನ್ನ Economic Counsellor and Director of the IMF’s Research Department ಹುದ್ದೆಗೆ ನೇಮಕ ಮಾಡಲಾಗಿದೆ. ಇದು ಚೀಫ್ ಎಕಾನಾಮಿಸ್ಟ್ ಹುದ್ದೆ. ಇದಕ್ಕೂ ಮುಂಚೆ ಅಂದರೆ ಜುಲೈ 2016 ರಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಹಣಕಾಸು ಸಲಹೆಗಾರರಾಗಿ ನೇಮಕಗೊಂಡಿದ್ದರು. ಕೇರಳದ ಎಡ ರಾಜಕೀಯ ವಲಯದಲ್ಲಿ ಲಿಬರಲ್ ಮನೋಭಾವದ ಗೀತಾರನ್ನ ನೇಮಕ ಮಾಡಿದ್ದು ಚರ್ಚೆಯ ವಿಷಯವಾಗಿತ್ತು. ಯಾರಿಗೂ ಈಕೆಯ ನೇಮಕ ಇಷ್ಟವಾಗಿರಲಿಲ್ಲ. ಕೊನೆಗೆ ಗೀತಾರವರು ನನ್ನ ನೇಮಕವಾಗಿದೆ ನಿಜ ಆದರೆ ನಾನು ಯಾವುದೇ ಸಲಹೆ ನೀಡುವುದಿಲ್ಲ ಮತ್ತು ಕೇರಳದ ರಾಜಕೀಯದಲ್ಲಿ ಮೂಗು ತೋರಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಗೀತಾ ಇಂದಿಗೆ ಅಮೆರಿಕನ್ ಸಿಟಿಜನ್. ಇಂತಹ ಮೇಧಾವಿಗಳನ್ನ ಅಮೇರಿಕಾ ಬಿಟ್ಟೀತೇ? ತೆರೆದ ಬಾಹುಗಳಿಂದ ಅಪ್ಪಿಕೊಳ್ಳುವುದೇ ಅಲ್ಲದೆ ಉನ್ನತ ಹುದ್ದೆ ಕೊಟ್ಟು ಗೌರವಿಸಿದೆ. 2018 ರ ಸಮಯದಲ್ಲೂ ಇಂದಿಗೂ ಅಮೇರಿಕಾ ಎಂದು ಜಗತ್ತು ಬಾಯಿ ಬಿಡುವುದಕ್ಕೆ ಇದೇ ಕಾರಣ. ಅಲ್ಲಿ ಪ್ರತಿಭೆಗೆ ಬೆಲೆ ಇದೆ.ರಘುರಾಮ ರಾಜನ್ ಅವರನ್ನ ನಾವು ಹೇಗೆ ನೆಡೆಸಿಕೊಂಡೆವು ನೆನೆಪಿದೆಯಲ್ಲವೇ? ಎರಡನೇ ಬಾರಿ ಅವರಿಗೆ ಅವಕಾಶ ನೀಡದೆ ಭಾರತ ಬಹು ದೊಡ್ಡ ತಪ್ಪು ಮಾಡಿತು. ಅಂದಿಗೆ ಇದನ್ನ ಕುರಿತು ಅನೇಕ ಲೇಖನವನ್ನ ಬರೆದೆ. ಬಹಳಷ್ಟು ಜನ ನಕ್ಕರು, ಹಲವರು ವಿರೋಧಿಸಿದರು. ಇಂದು ರಾಜನ್ ವ್ಯಕ್ತಿ ಪೂಜೆ ಮಾಡುವ ವ್ಯಕ್ತಿಯಲ್ಲ ಆತ ಕಾಂಗ್ರೆಸ್ ಏಜೆಂಟ್ ಅಲ್ಲ ಎನ್ನವುದು ಸಾಬೀತಾಗಿದೆ. ನಾವು ಕಪ್ಪನ್ನ ಕಪ್ಪು ಬಿಳಿಯನ್ನ ಬಿಳಿ ಎಂದು ಹೇಳುವುದಕ್ಕೆ ಸಂಕೋಚಿಸಬಾರದು. ಎಡ-ಬಲಗಳ ಸೈದಾಂತಿಕ ಗುದ್ದಾಟಗಳ ನಡುವೆ ಬಡವಾಗುವುದು ಮಾತ್ರ ದೇಶ. ರಾಜನ್ ಇರಬಹದು ಗೀತಾ ಇರಬಹದು ಇಲ್ಲಿನ ರಾಜಕೀಯದಿಂದ ಬೇಸತ್ತು ದೇಶ ಬಿಟ್ಟು ಹೋಗುತ್ತಾರೆ. ಅದು ಸಹಜ. ವಿಶ್ವದ ಆರ್ಥಿಕತೆ ಮತ್ತೊಂದು ಸುತ್ತು ಸುಸ್ತಾಗಿ ಮಲಗಲು ಸಿದ್ಧವಿರುವ ಈ ಸಮಯದಲ್ಲಿ ನಮಗೆ ರಾಜನ್, ಗೀತಾರಂತಹ ಗಟ್ಟಿ ನಿರ್ಧಾರ ತೆಗೆದುಕೊಂಡು ಕೆಲಸ ಮಾಡುವವರು ಬೇಕು ಹೇಳಿದ್ದಕ್ಕೆಲ್ಲ ‘ಜೀ ಹುಜೂರ್’ ಎನ್ನುವರಿಂದ ದೇಶಕ್ಕೇನು ಲಾಭವಾದೀತು? ಕೊನೆ ಮಾತು: ನಮ್ಮಲ್ಲಿ ಎಲ್ಲಿಯವರೆಗೆ ರಾಜಕೀಯ ಪ್ರೇರಿತ ನೇಮಕಗಳು ಆಗುತ್ತಿರುತ್ತವೆಯೋ ಅಲ್ಲಿಯವರೆಗೆ ಇಂತಹ ಘಟನೆಗಳು  ಮರುಕಳಿಸುತ್ತವೆ. ಭಾರತ ಬದಲಾಗಬೇಕಾದರೆ ಆಯಕಟ್ಟಿನ ಜಾಗಗಳಿಗೆ ಧರ್ಮ, ಜಾತಿ, ರಾಜಕೀಯ ಲಾಭಗಳ ಮರೆತು ನೇಮಕಗಳು ಆಗಬೇಕು. ರಾಜ್ಯದ ಮುಖ್ಯಮಂತ್ರಿ ಬದಲಾದ ಮರುಕ್ಷಣ ಬದಲಾಗುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿ ವರ್ಗ, ಕಣ್ಣಿಗೆ ರಾಚುವ ರಾಜಕೀಯ ದೊಂಬರಾಟದ ನಡುವೆ ಇದೆಲ್ಲಾ ಬಯಸುವುದು ಹೆಚ್ಚಾಯಿತೇನೋ ಅನ್ನಿಸುತ್ತದೆ. ಆದರೆ ಇದಾಗದ ಹೊರತು ಭಾರತ ‘ ಮುಂದುವರಿಯುತ್ತಿರುವ ದೇಶ ‘ಅಥವಾ’ ಎಮರ್ಜಿಂಗ್ ಮಾರ್ಕೆಟ್’ ಎನ್ನುವ ಹಣೆಪಟ್ಟಿಯಿಂದ ಹೊರಬಂದು ‘ಫಸ್ಟ್ ವರ್ಲ್ಡ್ ‘ಅಥವಾ ‘ಮುಂದುವರಿದ ದೇಶ’ ಎನ್ನಿಸಿಕೊಳ್ಳುವುದು ಕಷ್ಟವೇ ಸರಿ.-ರಂಗಸ್ವಾಮಿ ಮೂಕನಹಳ್ಳಿmuraram@yahoo.com

Related posts

ನಲ್ಲತಿ -ಹೊಲ್ಲತಿಗಳ ತಿಕ್ಕಾಟದಲ್ಲಿ ಸೌತ್ ಕೊರಿಯ; ಪರಿಹಾರವಿದೆಯಾ ?

Prajanudi Admin

ಮದುವೆ ಎಂಬ ಮಹಾ ಉದ್ಯಮ !

Prajanudi Admin

ಯೂನಿವರ್ಸಲ್ ಬೇಸಿಕ್ ಇನ್ಕಮ್ (UBI )ಚಾಲನೆ ಭಾರತದಲ್ಲಿ ಸಾಧ್ಯವೇ?

Prajanudi Admin

Leave a Comment