• Home
  • ಮುಖ್ಯಾಂಶಗಳು
  • ಯುದ್ಧೋನ್ಮಾದಿ ಪಾಕ್ ಸೇನೆಗೇ ತಟ್ಟಿದ ಆರ್ಥಿಕ ಕುಸಿತ!: ನಯಾಪೈಸೆ ಏರಿಕೆ ಕಂಡಿಲ್ಲ ರಕ್ಷಣಾ ಬಜೆಟ್
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

ಯುದ್ಧೋನ್ಮಾದಿ ಪಾಕ್ ಸೇನೆಗೇ ತಟ್ಟಿದ ಆರ್ಥಿಕ ಕುಸಿತ!: ನಯಾಪೈಸೆ ಏರಿಕೆ ಕಂಡಿಲ್ಲ ರಕ್ಷಣಾ ಬಜೆಟ್

ಹೊಸ ದಿಲ್ಲಿ: ಅತ್ಯಂತ ಸಂಕಷ್ಟದಲ್ಲಿರುವ ಪಾಕಿಸ್ತಾನದ ಆರ್ಥಿಕತೆಗೆ ಕಾಯಕಲ್ಪ ನೀಡುವ ಪ್ರಯತ್ನಕ್ಕೆ ಅಲ್ಲಿನ ಸೇನೆಯೇ ಕೈ ಹಾಕಿದೆ. ಸೇನಾ ಮುಖ್ಯಸ್ಥರಾಗಿರುವ ಕಮರ್‌ ಜಾವೆದ್‌ ಬಾಜ್ವಾ, ದೇಶದ ಹಲವು ಉನ್ನತ ಉದ್ಯಮಿಗಳ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಾಣಿಜ್ಯ ರಾಜಧಾನಿ ಕರಾಚಿ ಮತ್ತು ಸೇನಾ ಪ್ರಧಾನ ಕಚೇರಿ ಇರುವ ರಾವಲ್ಪಿಂಡಿಯ ಅತಿ ಭದ್ರತೆಯ ಸೇನಾ ಕಚೇರಿಗಳಲ್ಲಿ ಈ ವರ್ಷದಲ್ಲಿ ಮೂರು ಸಭೆಗಳು ನಡೆದಿವೆ. ಈ ಸಭೆಗಳಲ್ಲಿ ಕುಸಿದ ಆರ್ಥಿಕತೆಯನ್ನು ಮೇಲೆತ್ತುವ ಬಗೆ, ಹೂಡಿಕೆ ಪರಿಸ್ಥಿತಿಗಳನ್ನು ಚರ್ಚಿಸಲಾಗಿದೆ. ಸಭೆಯಲ್ಲಿ ಚರ್ಚೆ ನಡೆಸಿದ ಹಲವಾರು ಅಂಶಗಳ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರ ಮತ್ತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.

ಸೇನೆ ಮಧ್ಯಪ್ರವೇಶ ಯಾಕೆ?

1947ರಲ್ಲಿ ದೇಶ ರಚನೆಯಾದ ಬಳಿಕ ಹಲವು ಬಾರಿ ಸರಕಾರದ ವಿರುದ್ಧವೇ ದಂಗೆ ಎದ್ದ ಪಾಕಿಸ್ತಾನ ಸೇನೆ, ಇದೀಗ ಮೊದಲ ಬಾರಿ ಆರ್ಥಿಕ ಕುಸಿತದ ನೇರ ಬಿಸಿಯನ್ನು ಎದುರಿಸುತ್ತಿದೆ. ಪಾಕಿಸ್ತಾನದಲ್ಲಿ ಪ್ರತಿ ವರ್ಷವೂ ರಕ್ಷಣಾ ಬಜೆಟ್‌ ಹೆಚ್ಚಿಸಲಾಗುತ್ತದೆ. ಅದೆಷ್ಟೋ ದಶಕಗಳ ಬಳಿಕ ಈ ವರ್ಷ ಒಂದು ನಯಾಪೈಸೆಯನ್ನೂ ಏರಿಸಿಲ್ಲ.

ಅಫಘಾನಿಸ್ತಾನ ಗಡಿಯಲ್ಲಿ ತಾಲಿಬಾನ್‌ ಉಗ್ರರನ್ನು ಎದುರಿಸುವ ಅನಿವಾರ್ಯತೆ ಮತ್ತು ಭಾರತ ಗಡಿಯಲ್ಲಿ ಸದಾ ಎಚ್ಚರಿಕೆಯಲ್ಲಿರಬೇಕಾದ ಕಾಲದಲ್ಲಿ ಬಜೆಟ್‌ನಲ್ಲಿ ಹೆಚ್ಚು ಹಣ ಹೊಂದಿಸಲಾಗದೆ ಇರುವುದು ಸೇನೆಯನ್ನು ಕಂಗೆಡಿಸಿದೆ.

ಉದ್ಯಮಿಗಳ ಸ್ವಾಗತ

ಪಾಕಿಸ್ತಾನದಲ್ಲಿ ಸೇನೆ ಅತ್ಯಂತ ಪವರ್‌ಫುಲ್‌ ಆಗಿದ್ದು, ಗೌರವವನ್ನೂ ಹೊಂದಿದೆ. ಪ್ರಸಕ್ತ ಪ್ರಧಾನಿಯಾಗಿರುವ ಇಮ್ರಾನ್‌ ಖಾನ್‌ ಅಷ್ಟೊಂದು ಅನುಭವ ಹೊಂದಿಲ್ಲದಿರುವುದರಿಂದ ಸೇನೆ ತನ್ನ ಅನುಭವವನ್ನು ಹಂಚಿಕೊಳ್ಳುವುದು ಸರಿಯಾದ ಕ್ರಮ ಎಂದು ಅಲ್ಲಿನ ಹಲವು ಉದ್ಯಮಿಗಳು ಮತ್ತು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸಣ್ಣ ಪ್ರಮಾಣದ ದಂಗೆ?

ಉದ್ಯಮಿಗಳ ಸಭೆ ನಡೆಸಿರುವುದು ಪಾಕ್‌ ಸರಕಾರದ ವಿರುದ್ಧದ ಸಣ್ಣ ದಂಗೆ ಎಂದು ಕೂಡಾ ವಿಶ್ಲೇಷಿಸಲಾಗುತ್ತಿದೆ. ಪಾಕಿಸ್ತಾನವು ಭಾರತದ ವಿರುದ್ಧ ಮಾತ್ರವಲ್ಲ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬೆಲೆ ಕಳೆದುಕೊಂಡಿದೆ. ಯಾರೂ ಕೂಡಾ ಆ ದೇಶವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹೀಗಾಗಿ ಸೇನೆ ದೇಶದ ಬಲವನ್ನು ತೋರಿಸಲು ಮುಂದಾಗಿದೆ ಎಂದೂ ಹೇಳಲಾಗುತ್ತಿದೆ.

ಹಸ್ತಕ್ಷೇಪ ಅಲ್ಲಎಂದ ಹಣಕಾಸು ಇಲಾಖೆ

ಸೇನೆ ಮತ್ತು ಸರಕಾರದ ನಡುವಿನ ಸಂಬಂಧ ಅತ್ಯುತ್ತಮವಾಗಿದೆ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಆಗಾಗ ಹೇಳುತ್ತಲೇ ಇದ್ದಾರೆ. ಪಾಕಿಸ್ತಾನದ ಹಣಕಾಸು ಸಚಿವಾಲಯವೂ ಸೇನಾ ಮುಖ್ಯಸ್ಥರು ನಡೆಸಿದ ಉದ್ಯಮಿಗಳ ಸಭೆ ಸರಕಾರದ ಕೆಲಸದಲ್ಲಿ ಮಧ್ಯಪ್ರವೇಶ ಮಾಡಿದಂತಲ್ಲ ಎಂದಿದೆ. ಸೇನೆಗೂ ಅದರದ್ದೇ ಆದ ನಿಲುವುಗಳು ಇರುತ್ತವೆ. ಆದರೆ ಯಾವ ಹಂತದಲ್ಲೂಅದು ಸರಕಾರದ ನಡೆಗಳಲ್ಲಿ ಮಧ್ಯ ಪ್ರವೇಶಿಸಿಲ್ಲ ಎಂದು ವಕ್ತಾರ ಒಮರ್‌ ಹಮೀದ್‌ ಖಾನ್‌ ಹೇಳಿದ್ದಾರೆ.

Related posts

ವಿರಾಟ್​ ಕೊಹ್ಲಿ ಭರ್ಜರಿ ಅರ್ಧ ಶತಕ; ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾಗೆ 7 ವಿಕೆಟ್​ ಜಯ

vivaanwebservices@gmail.com

 “ಅನರ್ಹ ಶಾಸಕರ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಶಾಂತನಗೌಡರ್; ಸೆ 23ಕ್ಕೆ ವಿಚಾರಣೆ ಮುಂದೂಡಿಕೆ”

vivaanwebservices@gmail.com

ಮುಸ್ಲಿಂ ಬಾಂಧವರಿಂದ ಸಂಭ್ರಮದ ಮೊಹರಂ ಆಚರಣೆ

Kannadigara Prajanudi

Leave a Comment