• Home
  • ಸ್ಥಳೀಯ
  • ಬಿ.ಎಸ್.ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ ಎಂದು ಜರಿದ ಹೆಚ್.ಎಸ್.ಸುಂದರೇಶ್
ಸ್ಥಳೀಯ

ಬಿ.ಎಸ್.ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ ಎಂದು ಜರಿದ ಹೆಚ್.ಎಸ್.ಸುಂದರೇಶ್

ಶಿವಮೊಗ್ಗ: ಬಿ.ಎಸ್.ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಟೀಕಿಸಿದರು.

ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ತಮ್ಮದೇ ಬಿಜೆಪಿ ಸರ್ಕಾರ ಇದ್ದರೂ ಕೂಡ ಬಿ.ಎಸ್.ಯಡಿಯೂರಪ್ಪ ಏಕಾಂಗಿಯಾಗಿ ಕಾಣುತ್ತಾರೆ. ಕೇಂದ್ರದ ನಾಯಕರು ಅವರನ್ನು ಭೇಟಿಗೂ ಅವಕಾಶ ಕೊಟ್ಟಿಲ್ಲ.60 ತಿಂಗಳು ಕಳೆದರೂ ರಾಜ್ಯದ ಸಂತ್ರಸ್ಥರಿಗೆ ಪರಿಹಾರ ನೀಡದೇ ಇದೀಗ ಕೇವಲ 1200 ಕೋಟಿ ರೂ.ಕೊಟ್ಟಿದ್ದಾರೆ. ಇಷ್ಟು ಹಣ ಕೊಡಲು 60 ದಿನಗಳು ಬೇಕಿತ್ತೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಈ ಹಣ ಸಾಲದು. ಇನ್ನೊಂದಿಷ್ಟು ಕೊಡಿ ಎಂದು ಕೇಳುವ ಧೈರ್ಯ ಕೂಡ ಇಲ್ಲ. ರಾಜ್ಯದಲ್ಲಿ 2.5 ಲಕ್ಷ ಮನೆಗಳು ಸಂಪೂರ್ಣ ನಾಶವಾಗಿವೆ. 1.60 ಲಕ್ಷ ಮನೆಗಳು ಭಾಗಶಃ ಹಾಳಾಗಿವೆ.6,600 ಶಾಲೆಗಳು ಬಿದ್ದಿವೆ. 3600 ಅಂಗನವಾಡಿಗಳು ನೀರಿನಲ್ಲಿ ಮುಳುಗಿ ಹೋಗಿವೆ. ಸಾವಿರಾರು ಎಕರೆ ಬೆಳೆ ಹಾಳಾಗಿದೆ. ಎರಡು ತಿಂಗಳಿನಿಂದ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಸಂತ್ರಸ್ಥರು ಸಂಕಟದಲ್ಲಿದ್ದಾರೆ. ಇಷ್ಟೆಲ್ಲ ಆದರೂ ರಾಜ್ಯ ಸರ್ಕಾರ ಕೇವಲ 800 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಿ ಅದರ ದುಪ್ಪಟ್ಟು ಖರ್ಚು ಮಾಡಿರುವುದಾಗಿ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅವರೇ ಹೇಳುವಂತೆ ಖಜಾನೆ ಖಾಲಿಯಾಗಿದೆ. ಇದೆಲ್ಲವನ್ನು ನೋಡಿದರೆ ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ ಎಂಬುದು ಸ್ಪಷ್ಟವಾಗುತ್ತದೆ ಎಂದರು.

ಮೋದಿಯೇ ದೇವರು ಎನ್ನುವ ಪ್ರತಾಪ್‍ಸಿಂಹ, ಹಣವೇ ಬೇಡ ರಾಜ್ಯಸರ್ಕಾರವೇ ನಿಭಾಯಿಸುತ್ತೆ ಎನ್ನುವ ತೇಜಸ್ವಿ ಸೂರ್ಯ ಇವರೆಲ್ಲ ನಮ್ಮ ಸಂಸದರು. ಬೇಕಾಬಿಟ್ಟಿ ಹೇಳಿಕೆ ನೀಡುವ ಲಕ್ಷ್ಮಣ ಸವದಿ, ಅಶ್ವಥ್ ನಾರಾಯಣರಂತಹ ಉಪಮುಖ್ಯಮಂತ್ರಿಗಳು, ಮೋದಿ ಏನು ಮಾಡಿದ್ದಾರೆ ಎಂದು ಕೇಳಿದರೆ ಅಮೇರಿಕದಲ್ಲಿ ಕನ್ನಡದಲ್ಲಿ ಮಾತನಾಡಿಲ್ಲವೇ ಎಂದು ಉತ್ತರಿಸುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಅಲ್ಲಲ್ಲಿ ಬೊಗಳೇ ಬಿಡುವ ಸಿ.ಟಿ.ರವಿ ಇವರೆಲ್ಲ ನಮ್ಮ ಜನಪ್ರತಿನಿಧಿಗಳು. ಇವರಿಗೆ ಶಾಸನದ, ಸಂವಿಧಾನ, ಬಡವರ ಕಷ್ಟದ ಅರಿವಿದೆಯೇ, ನಕಲಿ ದೇಶಪ್ರೇಮದ ಸುದ್ದಿಗಳಲ್ಲಿ ಮುಳುಗಿಹೋಗುವ, ಪಾಕಿಸ್ತಾನವನ್ನು ವಿನಾಕಾರಣ ಮಧ್ಯೆ ಎಳೆದುತರುವ ಇಂತಹವರಿಂದ ದೇಶದ ಅಭಿವೃದ್ದಿಯಾದರೂ ಹೇಗೆ ಸಾಧ್ಯ ಎಂದು ವಾಗ್ದಾಳಿ ನಡೆಸಿದರು.

ಮೋದಿ ಮತ್ತೆ ದೇಶ ಸುತ್ತತೊಡಗಿದ್ದಾರೆ. ಆರ್ಥಿಕ ದುಸ್ಥಿತಿ ಬಗ್ಗೆ ಅವರಿಗೆ ಕಿಂಚಿತ್ತು ಅರಿವಿಲ್ಲ. ಖಾಸಗಿದಾರರಿಗೆ ಮಣೆ ಹಾಕುತ್ತಾ ಅಮೇರಿಕಕ್ಕೆ ಹೋಗಿ ಭಾರತದ ಮರ್ಯಾದೆ ಕಳೆಯುತ್ತಿದ್ದಾರೆ. ಅಲ್ಲಿ ಹೋಗಿ ಭಾರತದಲ್ಲಿ 11ಕೋಟಿ ಶೌಚಾಲಯ ಕಟ್ಟಿದ್ದೇನೆ ಎಂದು ಸುಳ್ಳು ಹೇಳುವ ಅವಶ್ಯಕತೆ ಯಾದರೂ ಏನು ಎಂದು ಪ್ರಶ್ನೆ ಮಾಡಿದರು.

ದೇಶದ ಬಗ್ಗೆ ಮಾತನಾಡಿದರೆ, ಮೋದಿಯನ್ನು ಖಂಡಿಸಿದರೆ ತಕ್ಷಣವೇ ಅವರ ವಿರುದ್ದ ಕ್ರಮ ಕೈಗೊಳ್ಳಲು ಹೇಳುತ್ತಾರೆ. ರಾಜ್ಯದಲ್ಲಿ ಸುಮಾರು 49 ಪ್ರಗತಿಪರರ ವಿರುದ್ದ ಕೇಸು ಹಾಕಲು ಹೊರಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿಯಾಗಿ ಮೆರೆಯುತ್ತಾ ದೇಶದ ಆರ್ಥಿಕ ಸ್ಥಿತಿಯನ್ನು ಕೆಳಮಟ್ಟಕ್ಕೆ ತರುತ್ತಿರುವ, ಅಧಿಕಾರವನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ರಾಜ್ಯ ಬಿಜೆಪಿ ನಾಯಕರ ವಿರುದ್ದ ಕಾಂಗ್ರೆಸ್ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಮುಂದಿನ ವಾರದಿಂದ ತೀವ್ರತರ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಸುಂದರೇಶ್ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪ್ರಮುಖರಾದ ಕಾಶಿ ವಿಶ್ವನಾಥ್, ರಾಮೇಗೌಡ, ಚಂದ್ರಭೂಪಾಲ್, ನಾಗರಾಜ್ ಇದ್ದರು.

 

Related posts

ಬೇಡಿಕೆ ಈಡೇರಿಕೆಗಾಗಿ ಕನ್ನಡ ಕಾರ್ಮಿಕ ರಕ್ಷಣಾ ವೇದಿಕೆಯಿಂದ ಉರುಳುಸೇವೆ

Kannadigara Prajanudi

ಬಹುಜನ ಸಮಾಜ ಪಾರ್ಟಿವತಿಯಿಂದ ಭೂಮಿ ಹಕ್ಕುಪತ್ರಕ್ಕಾಗಿ ಒತ್ತಾಯ

Kannadigara Prajanudi

ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕೋರಿ ಡಿಎಸ್ಎ್ಸ್ ಒತ್ತಾಯಿಸಿ ಪ್ರತಿಭಟನೆ

Kannadigara Prajanudi

Leave a Comment