• Home
  • ಮುಖ್ಯಾಂಶಗಳು
  • ನೋಟು ಅಮಾನ್ಯೀಕರಣ, ಜಿಎಸ್‌ಟಿಯಿಂದ ತೆರಿಗೆ ವಂಚನೆಗೆ ಬ್ರೇಕ್: ನಿರ್ಮಲಾ ಸೀತಾರಾಮನ್
ಮುಖ್ಯಾಂಶಗಳು

ನೋಟು ಅಮಾನ್ಯೀಕರಣ, ಜಿಎಸ್‌ಟಿಯಿಂದ ತೆರಿಗೆ ವಂಚನೆಗೆ ಬ್ರೇಕ್: ನಿರ್ಮಲಾ ಸೀತಾರಾಮನ್

ಧಾರವಾಡ: ಈ ಹಿಂದೆ ದೇಶದ ಶೇ. 85ರಷ್ಟು ಹಣಕಾಸಿನ ವ್ಯವಹಾರಗಳು ದಾಖಲೆ ಇಲ್ಲದೇ ನಡೆಯುತ್ತಿದ್ದವು. ಇದರಿಂದ ದೇಶದ ಆರ್ಥಿಕ ಪ್ರಗತಿ (ಜಿಡಿಪಿ) ಲೆಕ್ಕ ಹಾಕಲು ಆಗುತ್ತಿರಲಿಲ್ಲ. ಹೀಗಾಗಿ ಈಗ ಎಲ್ಲರನ್ನೂ ಒಂದೇ ತೆರಿಗೆ ವ್ಯಾಪ್ತಿಗೆ ತಂದು ಜಿಡಿಪಿ ವೃದ್ಧಿಗೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

 

ನಗರದ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಶನಿವಾರ ಕರ್ನಾಟಕ ತೆರಿಗೆ ಸಲಹೆಗಾರರ ಸಂಘ (ಕೆಎಸ್‌ಟಿಪಿಎ) ಆಯೋಜಿಸಿದ್ದ ರಾಷ್ಟ್ರೀಯ ತೆರಿಗೆ ಸಲಹೆಗಾರರ ದಿನ ಹಾಗೂ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೋಟು ಅಮಾನ್ಯೀಕರಣ, ಜಿಎಸ್‌ಟಿ ಜಾರಿ ಕ್ರಮದಿಂದ ತೆರಿಗೆ ವಂಚನೆ ನಿಯಂತ್ರಣಗೊಂಡಿದೆ. ಈ ಮೂಲಕ ಪ್ರತಿಯೊಬ್ಬರನ್ನೂ ತೆರಿಗೆ ಇಲಾಖೆ ಕಣ್ಗಾವಲಿಗೆ ತರಲಾಗಿದೆ. ಇದರಿಂದ ದೇಶ ಪಾರದರ್ಶಕತೆಯತ್ತ ಹೊರಟಿದ್ದು ಪ್ರತಿಯೊಬ್ಬರ ಲೆಕ್ಕ ಸಿಗುತ್ತಿದೆ ಎಂದು ಹೇಳಿದರು.

ತೆರಿಗೆ ಪಾವತಿ ಶಿಕ್ಷೆಯಲ್ಲ

ತೆರಿಗೆ ಪಾವತಿಸುವುದು ಶಿಕ್ಷೆಯಲ್ಲ. ನಾಗರಿಕರು ತೆರಿಗೆ ಪಾವತಿಸುವ ಮಹತ್ವವನ್ನು ತಿಳಿದುಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸುವುದು ತೆರಿಗೆ ಸಲಹೆಗಾರರ ಕರ್ತವ್ಯ. ಈ ಹಿಂದೆ ಜನರು ಒಂದೇ ಸರಕಿಗೆ ಎರಡೆರಡು ಬಾರಿ ತೆರಿಗೆ ಪಾವತಿಸುತ್ತಿದ್ದರು. ಆದರೆ ಸಂಪೂರ್ಣ ತಂತ್ರಜ್ಞಾನ ಅವಲಂಬಿತ ಜಿಎಸ್‌ಟಿ ಜಾರಿ ನಂತರ ಒಂದೇ ಬಾರಿ ತೆರಿಗೆ ಪಾವತಿಸುತ್ತಿದ್ದಾರೆ ಎಂದರು.

ಹೆಚ್ಚಿನ ತೆರಿಗೆ ಸಂಗ್ರಹವು ಪ್ರತಿಯೊಬ್ಬರು ಕಟ್ಟುವ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯವಾಗಲಿದೆ. ಜನರು ತಾವು ಪಾವತಿಸಿದ ತೆರಿಗೆಯ ಬಗ್ಗೆ ಚಿಂತೆ ಮಾಡುವ ಅಗತ್ಯತೆ ಇಲ್ಲ ಎಂದು ಪ್ರತಿಪಾದಿಸಿದರು.

ದೇಶಕ್ಕೆ ಆರ್ಥಿಕ ಸ್ವಾತಂತ್ರ್ಯ ಬೇಕು

ದೇಶಕ್ಕೆ ಬಲಿದಾನದ ಅವಶ್ಯಕತೆ ಇಲ್ಲ. ಆರ್ಥಿಕ ಸ್ವಾತಂತ್ರ್ಯ ಬೇಕಾಗಿದೆ. ನಿರಂತರ ವಿದ್ಯುತ್, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಇದು ಅತ್ಯಗತ್ಯವೂ ಹೌದು. ವ್ಯವಸ್ಥೆಯ ಡಿಜಿಟಲೀಕರಣ ರಾಷ್ಟ್ರದ ಅಭಿವೃದ್ಧಿಗೆ ವರದಾನವಾಗಿದೆ. ಎಲ್ಲರನ್ನೂ ತೆರಿಗೆ ವ್ಯಾಪ್ತಿಗೆ ತಂದು ನ್ಯಾಯಯುತ ವಹಿವಾಟಿಗೆ ಇದು ಹಾದಿ ಮಾಡಿಕೊಟ್ಟಿದೆ ಎಂದು ಹೇಳಿದರು.

ತೆರಿಗೆ ಸಂಗ್ರಹ ಹೆಚ್ಚಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ತೆರಿಗೆ ಸಲಹೆಗಾರರ ಮೇಲಿದೆ. ಇದು ದೇಶ ಕಟ್ಟಲು ನೀವು ನೀಡುವ ಕೊಡುಗೆಯೂ ಹೌದು. ನಿಮ್ಮ ಹಾಗೂ ತೆರಿಗೆ ಸಮಸ್ಯೆಗಳಿಗೆ ಸಚಿವಾಲಯ ಸದಾ ಸ್ಪಂದಿಸಲಿದೆ ಎಂದು ಅವರು ಭರವಸೆ ನೀಡಿದರು.

ಕೈಗಾರಿಕೆಗಳ ಉತ್ತೇಜನಕ್ಕೆ ಶೆಟ್ಟರ್ ಮನವಿ

ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಕರ್ನಾಟಕ ಪ್ರಮುಖ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಹೊಂದುತ್ತಿದೆ. ಕರಕುಶಲ ವಸ್ತುಗಳು, ಜವಳಿ, ಗಾರ್ಮೆಂಟ್ ಉದ್ಯಮ, ಇಂಧನ, ಕೃಷಿ ಮತ್ತು ಜಲ ಸಾರಿಗೆ ಚಟುವಟಿಕೆಗಳ ಮೇಲಿನ ಜಿಎಸ್‌ಟಿ ತೆರಿಗೆ ಕಡಿಮೆ ಮಾಡಬೇಕು. ವಾಣಿಜ್ಯ ಕೇಂದ್ರವಾಗಿರುವ ಹುಬ್ಬಳ್ಳಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗದ ಅಗತ್ಯವಿದೆ. ಕಲಬುರ್ಗಿ ಭಾಗದಲ್ಲಿ ತೊಗರಿಬೇಳೆ ಆಧಾರಿತ ಉದ್ಯಮಗಳ ಸ್ಥಾಪನೆಯಾಗಬೇಕು. ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಲ್ಲಿ ರಫ್ತು ಮತ್ತು ಆಮದು ಸೌಲಭ್ಯ ಕಲ್ಪಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕನಿಷ್ಠ ಕಾರ್ಪೋರೇಟ್ ತೆರಿಗೆ ಭಾರತದಲ್ಲಿದೆ. ಜಿಎಸ್‌ಟಿ ಆರಂಭಿಕ ಸಮಸ್ಯೆ ಕಂಡರೂ ಈಗ ಸರಳವಾಗಿದೆ. ದೇಶದ ಆರ್ಥಿಕ ಪ್ರಗತಿಗೆ ಮಹತ್ವದ ಪಾತ್ರವಹಿಸುವ ತೆರಿಗೆ ಸಲಹೆಗಾರರು ಕಕ್ಷಿದಾರರಿಗೆ ಸೂಕ್ತ ಕಾನೂನು ಸಲಹೆ ನೀಡಿ ನೆರವು ಒದಗಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತೆರಿಗೆ ಸಲಹೆಗಾರರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸಂಸದ ಶಿವಕುಮಾರ್ ಉದಾಸಿ, ಶಾಸಕ ಅರವಿಂದ ಬೆಲ್ಲದ, ವೈ.ಎನ್. ಶರ್ಮಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹುಬ್ಬಳ್ಳಿ-ಧಾರವಾಡ ಭೇಟಿ ಬಗ್ಗೆ ಸಂತಸ ಹಂಚಿಕೊಂಡ ನಿರ್ಮಲಾ ಸೀತಾರಾಮನ್‌, “ವಿದ್ಯೆ, ಸಂಗೀತ, ಜನಪದ ಹಾಗೂ ಶಾಸ್ತ್ರೀಯ ಕಲೆಗಳ ತವರೂರು ಎನಿಸಿರುವ ಧಾರವಾಡ ಜಿಲ್ಲೆಗೆ ತಾಯಿ ಸರಸ್ವತಿಯ ಆಶೀರ್ವಾದವಿದೆ. ನವರಾತ್ರಿಯ ಸಪ್ತಮಿ ದಿನದಂದು ಹು-ಧಾದಲ್ಲಿ ಇರುವ ಅವಕಾಶ ದೊರೆತಿರುವುದು ಸಂತಸ ತಂದಿದೆ,” ಎಂದರು.

Related posts

ವಿಶ್ವಸಂಸ್ಥೆ ಭಾಷಣದಲ್ಲಿ ತಮಿಳು ಕವಿ ಸಾಲನ್ನು ಉಲ್ಲೇಖಿಸಿದ ಹಿಂದಿನ ಉದ್ದೇಶವೇನು?

Kannadigara Prajanudi

ವಿದೇಶಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಕರ್ನಾಟಕವೇ ವಿದ್ಯಾಕಾಶಿ

Kannadigara Prajanudi

ಭಾರಿ ವಿರೋಧದ ಬೆನ್ನಲ್ಲೇ ರಾಜ್ಯಕ್ಕೆ ಮಧ್ಯಂತರ ಪ್ರವಾಹ ಪರಿಹಾರ ಹಣ ಘೋಷಿಸಿದ ಕೇಂದ್ರ ಸರ್ಕಾರ

Kannadigara Prajanudi

Leave a Comment