ಸಂಸದರು ಕೇಂದ್ರದಿಂದ ಅನುದಾನಕ್ಕಾಗಿ ಪ್ರಯತ್ನಿಸಲಿ...
- Prajanudi Digital
- May 15
- 1 min read

ಬೆಂಗಳೂರು: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಾಕಿಯಿರುವ ಸುಮಾರು 4,195 ಕೋಟಿ ರೂ.ಗಳ ಕೇಂದ್ರದ ಪಾಲು ಬಿಡುಗಡೆಯಾಗಿಲ್ಲ. ಈ ದಿಸೆಯಲ್ಲಿ ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರು ಕೇಂದ್ರವನ್ನು ಒತ್ತಾಯಿಸಿ ಬಾಕಿ ಅನುದಾನವನ್ನು ತರಲು ಪ್ರಯತ್ನಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ ವಿಧಾನಸೌಧದ ಸಮ್ಮೇಳನಾ ಕೊಠಡಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು 67 ಕೇಂದ್ರ ಪುರಸ್ಕೃತ ಯೋಜನೆಗಳಿದ್ದು, ಅವುಗಳ ಪ್ರಗತಿಪರಿಶೀಲನೆ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ ಎಂದರು.
ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೇಂದ್ರ ಹಾಗೂ ರಾಜ್ಯದ ಪಾಲು 50:50, 60:40, 70:30 ರಷ್ಟಿರುತ್ತದೆ. ಕರ್ನಾಟಕದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ 46859 ಕೋಟಿ ಖರ್ಚು ಮಾಡಲಾಗುತ್ತಿದೆ. 2024-25ರ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಡಿ ರಾಜ್ಯದ ಅನುದಾನ 24960 ಕೋಟಿ ರೂಪಾಯಿಗಳು, ಕೇಂದ್ರದ ಅನುದಾನ 22758ಕೋಟಿ ರೂಪಾಯಿಗಳಿದ್ದು ಕೇಂದ್ರದಿಂದ 18561ಕೋಟಿ ಮಾತ್ರ ಬಿಡುಗಡೆ ಆಗಿದೆ. ಆದರೆ, 4195 ಕೋಟಿ ರೂಪಾಯಿಗಳು ಬಿಡುಗಡೆ ಆಗಿಲ್ಲ ಎಂದು ಅವರು ಉಲ್ಲೇಖಿಸಿದರು.
ಅದೇ ರೀತಿ, ರಾಜ್ಯದ ಪಾಲು ಹೆಚ್ಚಿರುವ ಕೇಂದ್ರ ಪುರಸ್ಕೃತ ಯೋಜನೆಗಳಡಿ ಶೇ. 83 ರಷ್ಟು ಅನುದಾನ ಖರ್ಚಾಗಿದ್ದು, ಕೇಂದ್ರದಿಂದ ತಡವಾಗಿ ಅನುದಾನ ಬಿಡುಗಡೆಯೂ ಸೇರಿದಂತೆ ಹಲವು ಸಮಸ್ಯೆಗಳನ್ನು ವಿಷಯಗಳನ್ನು ಅಧಿಕಾರಿಗಳು ವಿವರಿಸಿದ್ದಾರೆ. ಆದ್ದರಿಂದ 2025-26 ರ ಸಾಲಿನಿಂದ ಶೇ.100 ರಷ್ಟು ಅನುದಾನವನ್ನು ಖರ್ಚು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ನಿಗದಿತ ಸಮಯದಲ್ಲಿ ಅನುದಾನ ಬಿಡುಗಡೆ ಮಾಡಲು ಕೇಂದ್ರವನ್ನು ಕೋರುವಂತೆ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರಿಗೂ ಸೂಚಿಸಲಾಗಿದೆ ಎಂದರು.
ಅಭಿವೃದ್ಧಿ ಯೋಜನೆಗಳಿಗೆ ಸೂಕ್ತ ಅನುದಾನ ನೀಡದೇ, ಕೇಂದ್ರ ಸರಕಾರ ದ್ವೇಷದ ರಾಜಕಾರಣವನ್ನು ಮಾಡುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ತನ್ನ ಪಾಲನ್ನು ನೀಡಲೇಬೇಕು. ಕೇಂದ್ರದ ಪಾಲು ನೀಡಲು ರಾಜ್ಯ ಸರಕಾರ ಪತ್ರ ಬರೆದಿದೆ ಎಂದು ಸಿದ್ದರಾಮಯ್ಯ ನುಡಿದರು.
Comments