ಸರ್ವರನ್ನೂ ಒಳಗೊಳ್ಳುವ ಪರಂಪರೆ ನಮ್ಮದು
- Prajanudi Digital
- May 13
- 1 min read

ಅಂಬೇಡ್ಕರ್ ಜಯಂತಿ, ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಸಿಎಂ ಸಿದ್ದರಾಮಯ್ಯ ಅಭಿಮತ
ಹೆಚ್.ಡಿ. ಕೋಟೆ: ಜಾತಿ-ಧರ್ಮದ ಸಹಿಷ್ಣತೆ ಇರುವ, ಸರ್ವರನ್ನೂ ಒಳಗೊಳ್ಳುವ ಪರಂಪರೆ ನಮ್ಮದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಲ್ಲಾಡಳಿತ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಮತ್ತು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮನುಷ್ಯರನ್ನು ಜಾತಿ-ಧರ್ಮದ ನೆಪದಲ್ಲಿ ವಿರೋಧಿಸುವವರು, ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಪ್ರಾಣಿಗಳನ್ನು ಪ್ರೀತಿಸುವುದು ತಪ್ಪಲ್ಲ, ಆದರೆ ಮನುಷ್ಯರನ್ನು ವಿರೋಧಿಸುವುದು ತಪ್ಪು ಎಂದರು.
ನಮ್ಮ ಸರ್ಕಾರ ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ಮತ್ತು ಸಂವಿಧಾನದ ಆಶಯಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆರ್ಥಿಕವಾಗಿ ಸರ್ವರಿಗೂ ಶಕ್ತಿ ಬಂದರೆ ಜಾತಿ ಹೋಗುತ್ತದೆ. ಬುದ್ದ, ಬಸವ ಅವರು ಜಾತಿಹೋಗಬೇಕೆಂದು ಹೋರಾಟ ಮಾಡಿದರೂ ಇನ್ನೂ ಜಾತಿ ಹೋಗಿಲ್ಲ. ಬಸವಣ್ಣರನ್ನು ಪ್ರೀತಿಸ್ತೀವಿ, ಪೂಜಿಸ್ತೀವಿ. ಆದರೆ ಬಸವಣ್ಣರನ್ನು ಪಾಲಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಹುಟ್ಡಿದ ಜಾತಿಯಲ್ಲೇ ಸಾಯಬೇಕು. ನಾವು ಮೇಲಕ್ಕೆ ಹೋಗುವಂತಿಲ್ಲ. ಜಾತಿ ಸಮಾಜಕ್ಕೆ ಚಲನೆ ಇಲ್ಲ. ವರ್ಗಕ್ಕೆ ಚಲನೆ ಇದೆ. ಎಲ್ಲರಿಗೂ ಶಿಕ್ಷಣ ಸಿಕ್ಕು, ಆರ್ಥಿಕವಾಗಿ, ಸಾಮಾಜಿಕವಾಗಿ ಅವಕಾಶಗಳು ಸಿಕ್ಕಾಗ ಮಾತ್ರ ಸಮಾಜಕ್ಕೆ ಚಲನೆ ಸಿಗುತ್ತದೆ ಎಂದರು.
ಜಾತಿ ಅಸಮಾನತೆ ಕಾರಣಕ್ಕೆ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸೇರಿ, ತಾನು ಹಿಂದೂವಾಗಿ ಹುಟ್ಟಿ ಹಿಂದೂವಾಗಿ ಸಾಯುವುದಿಲ್ಲ ಎಂದು ಘೋಷಿದಿದ್ದನ್ನು ಸ್ಮರಿಸಿದರು.
ಒಳಮೀಸಲಾತಿ ಕುರಿತಾದ ಗೊಂದಲ ನಿವಾರಿಸಲು ನಾಗಮೋಹನ್ ದಾಸ್ ಅವರ ಸಮಿತಿ ರಚಿಸಿದ್ದೇವೆ. ಸಮಿತಿಯ ಶಿಫಾರಸ್ಸಿನಂತೆ ದತ್ತಾಂಶ ಸಂಗ್ರಹಕ್ಕೆ ಸಮೀಕ್ಷೆ ಆರಂಭಿಸಿದ್ದೇವೆ ಎಂದರು. ಮೂರು ಹಂತಗಳಲ್ಲಿ ಸಮೀಕ್ಷೆ ನಡೆಯಲಿದೆ. ಈ ಸಮೀಕ್ಷೆ ಒಳ ಮೀಸಲಾತಿಯ ಎಲ್ಲಾ ಗೊಂದಲಗಳನ್ನು ನಿವಾರಿಸುತ್ತದೆ ಎನ್ನುವ ಭರವಸೆ ಇದೆ ಎಂದರು.
ಅಂಬೇಡ್ಕರ್ ಅವರು ಮೀಸಲಾತಿ ಕೊಡದೇ ಹೋಗಿದ್ದರೆ ನಾವು ಮನುಷ್ಯರಾಗಲು ಸಾಧ್ಯವೇ ಇರಲಿಲ್ಲ. ನಾನು ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಶತ ಶತಮಾನಗಳ ಕಾಲ ಶೂದ್ರ ಸಮುದಾಯವನ್ನು ಶಿಕ್ಷಣದಿಂದ ದೂರ ಇಡಲಾಗಿತ್ತು. ಸಂವಿಧಾನದ ಕಾರಣದಿಂದ ಶಿಕ್ಷಣ ಪಡೆದು ಮುಖ್ಯಮಂತ್ರಿ ಆದೆ, ಇಲ್ಲದಿದ್ದರೆ ಕುರಿನೊ, ಎಮ್ಮೆನೊ ಕಾಯ್ಕಂಡು ಇರಬೇಕಿತ್ತು ಎಂದರು.
ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಸತೀಶ್ ಜಾರಕಿಹೊಳಿ, ಸಂಸದ ಸುನೀಲ್ ಬೋಸ್, ಶಾಸಕರಾದ ಅನಿಲ್ ಚಿಕ್ಕಮಾದು, ಡಿ, ರವಿಶಂಕರ್, ಗಣೇಶ್‌ಪ್ರಸಾದ್, ಎಂಎಲ್‌ಸಿ ಡಾ. ಡಿ. ತಿಮ್ಮಯ್ಯ, ಗ್ಯಾರೆಂಟಿ ಯೋಜನೆಗಳ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Comments