Power Of India: WTC final, ಲಾರ್ಡ್ಸ್ ಗೆ 45 ಕೋಟಿ ರೂ ನಷ್ಟ!.. ಕಾರಣ ಏನು ಗೋತ್ತಾ? ಭಾರತ...
- Apr 8
- 2 min read
ಭಾರತ ಒಟ್ಟು 19 ಪಂದ್ಯಗಳನ್ನಾಡಿದ್ದು, ಈ ಪೈಕಿ 9 ಪಂದ್ಯಗಳನ್ನು ಗೆದ್ದು 8ರಲ್ಲಿ ಸೋತಿದೆ. 2 ಪಂದ್ಯಗಳು ಡ್ರಾ ಆಗಿದ್ದು, ಅಂತೆಯೇ ಸ್ಲೋ ಓವರ್ ಕಾರಣದಿಂದಾಗಿ 2 ಅಂಕಗಳನ್ನು ಸಹ ಕಳೆದುಕೊಂಡಿದೆ.

ದುಬೈ: ಜಾಗತಿಕ ಕ್ರಿಕೆಟ್ ಕ್ಷೇತ್ರದಲ್ಲಿ ಭಾರತದ ಪವರ್ ಎಷ್ಟಿದೆ ಎಂಬುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದ್ದು, ಭಾರತ ಪಾಲ್ಗೊಳ್ಳುತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಬರೊಬ್ಬರಿ 45 ಕೋಟಿ ರೂಗಳಷ್ಟು ನಷ್ಟ ಸಂಭವಿಸುವ ಸಾಧ್ಯತೆ ಇದೆ.
ಹೌದು.. ಅಚ್ಚರಿಯಾದರೂ ಇದು ಸತ್ಯ.. ಭಾರತ ತಂಡ ತನ್ನ ಇತ್ತೀಚಿನ ಟೆಸ್ಟ್ ಸರಣಿಗಳಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಪ್ರಮುಖವಾಗಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಹೀನಾಯ ಪ್ರದರ್ಶನ ನೀಡಿತ್ತು. ಪರಿಣಾಮ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ (WTC) ಫೈನಲ್ ಪಂದ್ಯ ಆಡುವ ಅರ್ಹತೆ ಕಳೆದುಕೊಂಡಿತು.
ಭಾರತ ಒಟ್ಟು 19 ಪಂದ್ಯಗಳನ್ನಾಡಿದ್ದು, ಈ ಪೈಕಿ 9 ಪಂದ್ಯಗಳನ್ನು ಗೆದ್ದು 8ರಲ್ಲಿ ಸೋತಿದೆ. 2 ಪಂದ್ಯಗಳು ಡ್ರಾ ಆಗಿದ್ದು, ಅಂತೆಯೇ ಸ್ಲೋ ಓವರ್ ಕಾರಣದಿಂದಾಗಿ 2 ಅಂಕಗಳನ್ನು ಸಹ ಕಳೆದುಕೊಂಡಿದೆ.
ಹೀಗಾಗಿ ಭಾರತದ ಬಳಿ ಒಟ್ಟಾರೆ 114 ಅಂಕಗಳಿದ್ದು, ವಿನ್ನಿಂಗ್ ಪರ್ಸೆಂಟೇಜ್ ಶೇ.50ರಷ್ಟಿದೆ. ಆ ಮೂಲಕ ಭಾರತ ತಂಡ WTC ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದು, 19 ಪಂದ್ಯಗಳೊಂದಿಗೆ, 13 ಗೆಲುವು, 4 ರಲ್ಲಿ ಮಾತ್ರ ಸೋಲು ಕಂಡಿರುವ ಆಸ್ಟ್ರೇಲಿಯಾ 2ನೇ ಸ್ಥಾನಕ್ಕೇರಿ ಫೈನಲ್ ನಲ್ಲಿ ಅರ್ಹತೆ ಗಿಟ್ಟಿಸಿದೆ. ಅಂತೆಯೇ ಅಸ್ಟ್ರೇಲಿಯಾದ ವಿನ್ನಿಂಗ್ ಪರ್ಸೆಂಟೇಜ್ 67.54 ರಷ್ಟಿದೆ.
ಇನ್ನು ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರುವ ದಕ್ಷಿಣ ಆಫ್ರಿಕಾ 12 ಪಂದ್ಯಗಳ ಪೈಕಿ 8 ಜಯ, 3 ಸೋಲುಗಳ ಮೂಲಕ ಶೇ.69.44ರಷ್ಟು ವಿನ್ನಿಂಗ್ ಪರ್ಸೆಂಟೇಜ್ ಹೊಂದಿದೆ. ಹೀಗಾಗಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನ ಫೈನಲ್ ಗೇರಿವೆ.
ಲಾರ್ಡ್ಸ್ ಕ್ರೀಡಾಂಗಣಕ್ಕೆ 45 ಕೋಟಿ ರೂ ನಷ್ಟ
ಇನ್ನು ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನ ಫೈನಲ್ ರೇಸ್ ನಿಂದ ಹೊರ ಬೀಳುತ್ತಿದ್ದಂತೆಯೇ ಅತ್ತ ಫೈನಲ್ ಪಂದ್ಯಕ್ಕೆ ವೇದಿಕೆಯಾಗಿರುವ ಲಂಡನ್ ನ ಲಾರ್ಡ್ಸ್ ಕ್ರಿಕೆಟ್ ಮೈದಾನಕ್ಕೆ ಬರೊಬ್ಬರಿ 45 ಕೋಟಿ ರೂ ನಷ್ಟ ಎದುರಾಗಿದೆ. ಜೂನ್ 11 ರಿಂದ 15, 2025 ರವರೆಗೆ ಲಂಡನ್‌ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದ ಟಿಕೆಟ್ ಗಳನ್ನು ಮಾರಾಟ ಮಾಡಿ ಲಾರ್ಡ್ಸ್ ಮೈದಾನ ಆದಾಯ ಮಾಡಿಕೊಳ್ಳಬೇಕು. ಆದರೆ ಇದೀಗ ಭಾರತ ಫೈನಲ್ ರೇಸ್ ನಿಂದ ಹೊರಬಿದ್ದ ಬಳಿಕ ಕೋಟ್ಯಂತರ ರೂ ನಷ್ಟದ ಭೀತಿ ಎದುರಿಸುತ್ತಿದೆ.
ನಷ್ಟ ಏಕೆ?
ಜೂನ್ 7ರಿಂದ 11 ರ ವರೆಗೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಆಡುವ ನಿರೀಕ್ಷೆಯಿತ್ತು. ಇದೇ ಕಾರಣಕ್ಕೆ ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಭಾರತೀಯ ಅಭಿಮಾನಿಗಳಿಂದ ಬೇಡಿಕೆಯನ್ನು ನಿರೀಕ್ಷಿಸಿ ತನ್ನ ಟಿಕೆಟ್‌ಗಳ ಬೆಲೆಯನ್ನು ಪ್ರೀಮಿಯಂ ದರದಲ್ಲಿ ನಿಗದಿಪಡಿಸಿತ್ತು. ಆದಾಗ್ಯೂ, ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ (BGT)ಯಲ್ಲಿ ಭಾರತ 3-1 ಸರಣಿ ಸೋಲು ಕಂಡ ಹಿನ್ನಲೆಯಲ್ಲಿ ಭಾರತ WTC ಫೈನಲ್ ಗೆ ಅರ್ಹತೆ ಪಡೆಯುವ ಅವಕಾಶವನ್ನು ಕಳೆದುಕೊಂಡಿತು. ಹೀಗಾಗಿ ಫೈನಲ್ ಪಂದ್ಯದ ಟಿಕೆಟ್ ಗಳಿಗಾಗಿ ಇದ್ದ ಬೇಡಿಕೆ ಕೂಡ ಗಣನೀಯವಾಗಿ ಕುಸಿಯಿತು.
ಬೆಲೆ ಪರಿಷ್ಕರಣೆ ಮಾಡಿದ ಎಂಸಿಸಿ
ಅತ್ತ ಬೇಡಿಕೆ ಕುಸಿಯುತ್ತಲೇ ಇತ್ತ ಎಂಸಿಸಿ ತನ್ನ ಟಿಕೆಟ್ ದರಗಳನ್ನೂ ಕೂಡ ಪರಿಷ್ಕರಣೆ ಮಾಡಿತು. ಭಾರತ ಫೈನಲ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟವಾದ ನಂತರ, ಎಂಸಿಸಿ ಟಿಕೆಟ್ ಬೆಲೆಗಳನ್ನು ಕಡಿಮೆ ಮಾಡಲು ನಿರ್ಧರಿಸಿತು. ಅದರಂತೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದ ಟಿಕೆಟ್‌ಗಳ ಬೆಲೆ ಈಗ £40 ರಿಂದ £90 (ರೂ. 4,500 ರಿಂದ ರೂ. 10,100) ವರೆಗೆ ಇದೆ ಎಂದು ವರದಿ ತಿಳಿಸಿದೆ.
ಅಂದರೆ ಪ್ರಸ್ತುತ ಪರಿಷ್ಕರಣೆ ಮಾಡಿರುವ ಟಿಕೆಟ್ ಬೆಲೆ ನವೀಕರಿಸಿದ ಬೆಲೆ ಶ್ರೇಣಿಯು ಟಿಕೆಟ್‌ಗಳ ಮೂಲ ಬೆಲೆಗಿಂತ ಸರಿಸುಮಾರು £50 ಅಗ್ಗವಾಗಿದೆ. ಇದರಿಂದ ಲಾರ್ಡ್ಸ್ ಮೈದಾನದ ಆಡಳಿತ ಮಂಡಳಿ ನಿರೀಕ್ಷಿಸಿದಕ್ಕಿಂತ ಬರೊಬ್ಬರಿ 45 ಕೋಟಿರೂಗಳಷ್ಟು ಆದಾಯ ಕಡಿಮೆಯಾಗಲಿದೆ.
ಅಂತೆಯೇ ಆದಾಯದಲ್ಲಿನ ನಷ್ಟವು ಕ್ರಿಕೆಟ್ ನಲ್ಲಿ ಆರ್ಥಿಕ ಬಲ ಹೆಚ್ಚಿಸುವಲ್ಲಿ ಭಾರತೀಯ ತಂಡ ಮತ್ತು ಅದರ ಅಭಿಮಾನಿಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
Comments