ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ
- new waves technology
- Apr 8
- 1 min read
371ಜೆ ಜಾರಿಗಾಗಿ ಕಲ್ಯಾಣ ಕರ್ನಾಟಕದ ಎಲ್ಲ ಜಾತಿ, ಧರ್ಮದ ಮಂದಿ ಒಟ್ಟಾಗಿ ಹೋರಾಟ ನಡೆಸಿದ್ದರು. ಈ ಜನ ಹೋರಾಟದ ಬೆನ್ನಿಗೆ ನಿಂತು ಮಲ್ಲಿಕಾರ್ಜುನ ಖರ್ಗೆ ಅವರು 371 ಜೆ ಜಾರಿ ಮಾಡಿಸಿದರು.

ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ಹಾಗೂ ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.
ಸಿಂಧನೂರಿನ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಸಿಂಧನೂರು ದಸರಾ ಉತ್ಸವ-2024 ಉದ್ಘಾಟಿಸಿ ಮಾತನಾಡಿದ ಅವರು, ದಸರಾ ಯಾವುದೇ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಾದ ವೈಭವ ಅಲ್ಲ. ಇದು ಸರ್ವ ಜನಾಂಗದ ಸಂಭ್ರಮದ ಹಬ್ಬ. ಅಂಬಾ ದೇವಿ ಕೂಡ ಚಾಮುಂಡೇಶ್ವರಿಯ ಅವತಾರ. ಇದು ಸಾಂಸ್ಕೃತಿಕ ಹಿರಿಮೆ ಮತ್ತು ಚರಿತ್ರೆಯನ್ನು ಸಾರುವ ಹಬ್ಬ. ತಾಯಿ ಅಂಬಾದೇವಿ ಮತ್ತು ಚಾಮುಂಡಿ ತಾಯಿಯ ಕೃಪೆಯಿಂದ ರಾಜ್ಯದಲ್ಲಿ ಮಳೆ, ಬೆಳೆ ಉತ್ತಮವಾಗಿದೆ. ಜಲಾಶಯ, ಕೆರೆ ಕಟ್ಟೆಗಳು ತುಂಬಿವೆ. ಹೀಗಾಗಿ ಈ ಬಾರಿ ಸಮೃದ್ಧಿ ಕಾಣಲಿದ್ದೇವೆ ಎನ್ನುವ ನಂಬಿಕೆ ನನಗಿದೆ ಎಂದು ಹೇಳಿದರು.
371ಜೆ ಜಾರಿಗಾಗಿ ಕಲ್ಯಾಣ ಕರ್ನಾಟಕದ ಎಲ್ಲ ಜಾತಿ, ಧರ್ಮದ ಮಂದಿ ಒಟ್ಟಾಗಿ ಹೋರಾಟ ನಡೆಸಿದ್ದರು. ಈ ಜನ ಹೋರಾಟದ ಬೆನ್ನಿಗೆ ನಿಂತು ಮಲ್ಲಿಕಾರ್ಜುನ ಖರ್ಗೆ ಅವರು 371 ಜೆ ಜಾರಿ ಮಾಡಿಸಿದರು. 371ಜೆ ಜಾರಿಯಾಗಿ ದಶಮಾನೋತ್ಸವ ಪ್ರಯುಕ್ತ ನಮ್ಮ ಸರ್ಕಾರ ಕಲ್ಬುರ್ಗಿಯಲ್ಲಿ ವಿಶೇಷ ಕ್ಯಾಬಿನೆಟ್ ನಡೆಸಿ ಅದೊಂದೇ ದಿನ ರೂ.11,770 ಕೋಟಿ ಯೋಜನೆಗಳಿಗೆ ಮಂಜೂರಾತಿ ನೀಡಿದ್ದೇವೆ.
ರಾಜ್ಯ ಬಜೆಟ್ ನಲ್ಲಿ ಕಳೆದ ವರ್ಷ ರೂ.3,000 ಕೋಟಿ, ಈ ವರ್ಷ ರೂ.5,000 ಕೋಟಿಯನ್ನು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಘೋಷಿಸಿದ್ದೇನೆ. ಪ್ರಾದೇಶಿಕ ಅಸಮಾನತೆ ಸರಿದೂಗಿಸುವ ಕಾರಣಕ್ಕೆ ಈ ಅನುದಾನ ನೀಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇದ್ದ 109000 ಹುದ್ದೆಗಳಲ್ಲಿ 79000 ಹುದ್ದೆ ಭರ್ತಿ ಮಾಡಿದ್ದೇವೆ. ಉಳಿದದ್ದನ್ನು ಕೂಡ ಭರ್ತಿ ಮಾಡಲಾಗುವುದು. ಇದೆಲ್ಲಾ ಸಾಧ್ಯವಾಗಿದ್ದು 371ಜೆ ಇಂದ. ಇದರ ಜಾರಿಗೆ ಸಹಕರಿಸಿದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ನಾವೆಲ್ಲಾ ಸ್ಮರಿಸಬೇಕು ಎಂದು ತಿಳಿಸಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬಡವರ, ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. 1,695 ಕೋಟಿ ವೆಚ್ಚದ ಸಿಂಧನೂರಿನಿಂದ ಕಲ್ಮಲಾ ಜಂಕ್ಷನ್‌ವರೆಗೆ (78 ಕಿ.ಮೀ.) ಚತುಷ್ಪಥ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಹಾಗೂ ಗೊರೇಬಾಳ ಕ್ಯಾಂಪ್‌ನಿಂದ ಗಾಂಧಿನಗರ ರಸ್ತೆ ನಿರ್ಮಾಣಕ್ಕೆ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದಾರೆಂದು ಹೇಳಿದರು.
Comments