top of page

ಸುಬ್ರಹ್ಮಣ್ಯದಿಂದ ಬೊಕ್ಕಸಕ್ಕೆ 100 ಕೋಟಿಗೂ ಅಧಿಕ ಆದಾಯ ಇದ್ರೂ ಭಕ್ತರನ್ನು ಕುರಿಗಳಂತೆ ಕಾಣುತ್ತಿದೆ ಸರ್ಕಾರ!; ಪತ್ರಕರ್ತ ರಾಜೀವ ಹೆಗಡೆ ಅಭಿಮತ

  • Apr 8
  • 3 min read

ಬೆಂಗಳೂರು: ಹಬ್ಬ ಹರಿದಿನಗಳು ಬಂತೆಂದರೆ ದೇವಸ್ಥಾನಗಳಲ್ಲಿ ಭಕ್ತರ ದಟ್ಟಣೆ ಸಾಮಾನ್ಯ. ಜನಪ್ರಿಯ ಮತ್ತು ಪುರಾತನ ಪುಣ್ಯಕ್ಷೇತ್ರಗಳಲ್ಲಿ ಸ್ವಲ್ಪ ಹೆಚ್ಚು. ಕರ್ನಾಟಕದ ಬಹುತೇಕ ಮುಜುರಾಯಿ ದೇವಸ್ಥಾನಗಳಲ್ಲಿ ಭಕ್ತರ ಸೌಕರ್ಯದ ವಿಚಾರ ಬಂದರೆ ಅದಕ್ಕೆ ಕನಿಷ್ಠ ಆದ್ಯತೆ.


ree









ಪರಿಣಾಮ ತೊಂದರೆ ಎಲ್ಲವನ್ನೂ ಅನುಭವಿಸಬೇಕಾದ್ದು ಆ ದೇವಾಲಯಗಳಿಗೆ ಆದಾಯ ಒದಗಿಸುವ ಭಕ್ತರೇ. ಇಂತಹ ವಿಚಾರ ಪದೇಪದೆ ಚರ್ಚೆಗೆ ಬರುತ್ತಿರುತ್ತದೆ. ದೀಪಾವಳಿ ಹಬ್ಬಕ್ಕೆ ಕರ್ನಾಟಕದ ಅತಿ ಶ್ರೀಮಂತ ದೇವಸ್ಥಾನ ಅಂದರೆ ಸರ್ಕಾರದ ಬೊಕ್ಕಸಕ್ಕೆ 100 ಕೋಟಿ ರೂಪಾಯಿಗೂ ಹೆಚ್ಚು ಆದಾಯ ತರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಬಾರಿ ಹೆಚ್ಚು ಜನದಟ್ಟಣೆ ಇತ್ತು. ಪತ್ರಕರ್ತ ರಾಜೀವ ಹೆಗಡೆ ಕೂಡ ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಅಲ್ಲಿ ನೋಡಿದ, ಅನುಭವಿಸಿದ ಅವ್ಯವಸ್ಥೆಯ ಚಿತ್ರಣವನ್ನು ಕಟ್ಟಿಕೊಟ್ಟು ಸರ್ಕಾರದ ಗಮನಸೆಳೆಯಲು ಪ್ರಯತ್ನಿಸಿದ್ದಾರೆ. ಅವರ ಬರಹ ಇಲ್ಲಿದ-

ಶ್ರೀಮಂತ ದೇವಸ್ಥಾನದ ಭಕ್ತರನ್ನು ಕುರಿಗಳಂತೆ ನಡೆಸಿಕೊಳ್ಳುತ್ತಿರುವ ಸರ್ಕಾರ!

ದೀಪಾವಳಿ ಹಬ್ಬದ ದಿನದಂದು ಸುಬ್ರಹ್ಮಣ್ಯಕ್ಕೆ ಹೋಗಿದ್ದೆ. ದೇವಸ್ಥಾನದ ಹೆಬ್ಬಾಗಿಲ ಬಳಿ ಬಂದು ನಿಂತಾಗಲೇ ಒಳಗೆ ಹೋಗುವ ಬಗ್ಗೆ ದ್ವಂದ್ವ ಶುರುವಾಗಿತ್ತು. ಆದರೆ ಅಲ್ಲಿಯವರೆಗೆ ಬಂದು ದರ್ಶನ ಮಾಡದಿದ್ದರೆ ಸುಬ್ರಹ್ಮಣ್ಯ ಕ್ಷಮಿಸಲಾರ ಎನಿಸಿತು. ಜೈ ಎಂದುಕೊಂಡು ಒಳ ನುಗ್ಗಿದೆ. ಅಲ್ಲಿಂದ ಐವತ್ತು ಮೀಟರ್‌ ಉದ್ದದ ಇನ್ನೊಂದು ದ್ವಾರದವರೆಗೆ ಹೋಗಲು ಸುಮಾರು ಒಂದು ಗಂಟೆ ಬೇಕಾಯಿತು. ಅಷ್ಟರೊಳಗೆ ಒಂದಿಷ್ಟು ವಯಸ್ಸಾದವರು ಬಂದ ದಾರಿಗೆ ಸುಂಕವಿಲ್ಲವೆಂದು ಅಲ್ಲಿಂದಲೇ ಹೊರ ನಡೆದರು. ಸಣ್ಣ ಮಕ್ಕಳಿದ್ದ ಕೆಲ ತಾಯಂದಿರು ಕೂಡ ದೇವಾಲಯದ ಬಾಗಿಲನ್ನೇ ದೇವರೆಂದು ತಿಳಿದು ನಮಸ್ಕರಿಸಿ ವಾಪಸ್ಸಾದರು. ಅಲ್ಲಿಯ ನೂಕು ನುಗ್ಗಲಿನಲ್ಲಿ ಒಂದಿಷ್ಟು ಜನರು ಕೆಳಕ್ಕೆ ಬಿದ್ದರು. ಅದರ ಮಧ್ಯೆ ಒಂದಿಷ್ಟು ಭಕ್ತರನ್ನು ʼಕರ್ನಾಟಕ ಸರ್ಕಾರʼದ ಬ್ಯಾಚ್‌ ಹಾಕಿಕೊಂಡವರು ವಿಶೇಷವಾಗಿ ಕರೆದುಕೊಂಡು ಹೋಗುತ್ತಿದ್ದರು. ಅವರು ಸುಲಭವಾಗಿ ಹೋಗುತ್ತಿರುವುದನ್ನು ನಾವೆಲ್ಲರೂ ನೋಡಿಕೊಂಡು ಬೆವರು ಒರೆಸಿಕೊಳ್ಳುತ್ತಿದ್ದೆವು.

ಅಲ್ಲಿಯ ನೂಕು ನುಗ್ಗಲಿನಲ್ಲಿ ಹೈರಾಣಾಗಿದ್ದ ನಮ್ಮನ್ನು ಕುರಿಗಳ ಮಂದೆಯಂತೆ ದೇವಸ್ಥಾನದ ಮುಖ್ಯ ಪ್ರಾಂಗಣಕ್ಕೆ ಬಿಡಲಾಯಿತು. ಅಲ್ಲಿಯೂ ಯಾವುದೇ ಶಿಸ್ತಿಲ್ಲ. ಸಾಲುಗಳಲ್ಲಿ ಹೋಗಲು ಸರಿಯಾಗಿ ಒಂದು ವ್ಯವಸ್ಥೆ ಮಾಡುವುದಿರಲಿ, ಹಗ್ಗವನ್ನು ಕೂಡ ಕಟ್ಟಿರಲಿಲ್ಲ. ಪ್ರಾಂಗಣದಲ್ಲಿ ಎಲ್ಲಿ ಹಗ್ಗವನ್ನು ಕಟ್ಟಲಾಗಿತ್ತೋ ಅಲ್ಲಿ ಜನರಿಗೆ ಹೋಗಲು ಅವಕಾಶ ನೀಡಿರಲಿಲ್ಲ. ಆ ಅವ್ಯವಸ್ಥೆಯಲ್ಲಿ ಒಂದು ಸಾಲಿನ ಬದಲು, ಒಟ್ಟಾಗಿ ಎರಡು-ಮೂರು ಸಾಲುಗಳನ್ನು ಮಾಡಿಸಿ ದೇವಸ್ಥಾನದ ಒಳಗೆ ನುಗ್ಗಿಸುತ್ತಿದ್ದರು. ಹೀಗಾಗಿ ನುಗ್ಗುವ ತಾಕತ್ತಿದ್ದವನಿಗೆ ಸುಬ್ರಹ್ಮಣ್ಯ ದೇವರ ದರ್ಶನ ಎನ್ನುವ ರೀತಿಯಾಗಿತ್ತು. ಆ ಸಾಲಿನ ಮಧ್ಯದಲ್ಲಿ ಒಂದಿಷ್ಟು ವಯೋವೃದ್ಧರು, ಮಹಿಳೆಯರು ಸುಸ್ತಾದರೆ, ಅವರಿಗೆ ಕೂರುವ ವ್ಯವಸ್ಥೆ ಹಾಗಿರಲಿ, ಕುಡಿಯುವ ನೀರು ಕೂಡ ಇರಲಿಲ್ಲ. ಅಷ್ಟೆಲ್ಲ ಸಾಲುಗಳ ಮಧ್ಯೆ ಗರ್ಭಗುಡಿಯ ಬಳಿಯ ಮುಖ್ಯಧ್ವಾರಕ್ಕೆ ಹೋದಾಗ ಅಲ್ಲಿ, ʼಹಿರಿಯ ನಾಗರಿಕರಿಗೆ ವಿಶೇಷ ದರ್ಶನʼ ಎಂದು ನಾಮಫಲಕ ಹಾಕಿದ್ದರು. ದೇವಸ್ಥಾನದ ಪ್ರವೇಶ ದ್ವಾರದ ಬಳಿಯೂ ಯಾರಿಗೂ ಕಾಣದಂತೆ ಎಲ್ಲೋ ಹಾಕಿದ್ದಾರಂತೆ. ಇವನ್ನೆಲ್ಲ ನೋಡುವಷ್ಟರಲ್ಲಿ ಅಲ್ಲಿ ಸಾಲಿನಲ್ಲಿದ್ದ ಕೆಲವರು ರೊಚ್ಚಿಗೆದ್ದು ಭದ್ರತಾ ಸಿಬ್ಬಂದಿ ಬಳಿ ಜೋರು ಧ್ವನಿಯಲ್ಲಿ ಕಿರುಚಾಡಲು ಆರಂಭಿಸಿದರು. ಅವ್ಯವಸ್ಥೆಯ ಆಗರವನ್ನು ನೋಡಿದ್ದ ಭಕ್ತರ ಸಾತ್ವಿಕ ಆಕ್ರೋಶಕ್ಕೆ ಕಾರಣವಿತ್ತು.

ಅಲ್ಲಿಯೇ ಇದ್ದ ಕೆಲ ಸಿಬ್ಬಂದಿಯನ್ನು ಈ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದಾಗ, ʼನಾವೇನು ಮಾಡಲಾಗುತ್ತದೆ ಸಾರ್‌, ಎಸಿ ರೂಮಿನಲ್ಲಿ ಕೂರುವರನ್ನು ಹೋಗಿ ಕೇಳಿʼ ಎಂದು ಹೇಳಿದರು. ಇದಾದ ಬಳಿಕ ಅಲ್ಲಿಯ ಅಧೀಕ್ಷಕ ಅರವಿಂದ್‌ ಎನ್ನುವವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಪ್ರಶ್ನಿಸಿದಾಗ ಎಂದಿನ ಸರ್ಕಾರಿ ದಾಟಿಯಂತೆ, ʼನಾನು ಬಂದು ಒಂದು ತಿಂಗಳಾಯಿತು, ಮಾಸ್ಟರ್‌ ಪ್ಲ್ಯಾನ್‌ ಮಾಡುತ್ತಿದ್ದೇವೆ. ಕೇವಲ ದೂರು, ಟೀಕೆ ಮಾಡಬೇಡಿ. ಸಲಹೆ ಕೊಡಿʼ ಎಂದು ಹೇಳಿದರು. ಕರೆಯ ಆರಂಭದಲ್ಲಿದ್ದ ಸರ್ಕಾರಿ ಅಧಿಕಾರದ ಮಾತುಗಳು, ಕೊನೆಗೆ ಸ್ವಲ್ಪ ತಗ್ಗಿತ್ತು. ತಪ್ಪಿನ ಅರಿವಾಗಿದ್ದರೂ, ಸರ್ಕಾರಿ ಭಾಷೆಯಲ್ಲಿ ಅಸಹಾಯಕರಂತೆ ಸಮರ್ಥಿಸಿಕೊಳ್ಳುತ್ತಿದ್ದರು.

ಇದಕ್ಕೂ ಮುನ್ನ ಅದೇ ದಿನದಂದು ಧರ್ಮಸ್ಥಳ ದಕ್ಷಿಣ ಕನ್ನಡ ಇನ್ನೂ ಎರಡು ದೇವಸ್ಥಾನಗಳಿಗೆ ಹೋಗಿದ್ದೆ. ಅಲ್ಲಿ ಇಷ್ಟೊಂದು ಅವ್ಯವಸ್ಥೆ ಕಾಣಿಸಲಿಲ್ಲ. ಭಕ್ತರಿಗೆ ನೆರವಾಗುವ ನಿಟ್ಟಿನಲ್ಲಿ ಅಲ್ಲಲ್ಲಿ ಸೂಚನಾ ಫಲಕಗಳಿದ್ದವು. ನಿರಂತರವಾಗಿ ಮೈಕ್‌ನಲ್ಲೂ ಸಲಹೆಗಳನ್ನು ಕೊಡುತ್ತಿದ್ದರು. ಯಾವ ಸೇವೆ ಎಲ್ಲಿ ನಡೆಯುತ್ತದೆ, ಚೀಟಿ ಪಡೆಯುವುದು ಹೇಗೆ, ಅದಕ್ಕೆ ಎಲ್ಲಿ ಪೂಜೆ ನಡೆಯುತ್ತದೆ ಎನ್ನುವ ಪ್ರತಿ ವಿವರಗಳು ಕೂಡ ಎಲ್ಲೆಡೆ ಸೂಚನಾ ಫಲಕ ಹಾಗೂ ಮೈಕ್‌ ಮೂಲಕ ತಿಳಿದುಕೊಳ್ಳುವ ಅವಕಾಶವಿತ್ತು. ಆದರೆ ಇಲ್ಲಿ ಬಹುತೇಕ ಎಲ್ಲವನ್ನೂ ಸುಬ್ರಹ್ಮಣ್ಯನಿಗೆ ಬಿಡಲಾಗಿದೆ. ದೇವರೇ ಎಲ್ಲವನ್ನೂ ದರ್ಶನ ಮಾಡಿಸಬೇಕು. ಉಳಿದಂತೆ ಎಲ್ಲವೂ ಉಚಿತವಾಗಿ ಸಿಗುವುದು ಅಲ್ಲಿರುವ ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಉದ್ಧಟತನದ ವರ್ತನೆಯ ಧಿಮಾಕಿನ ಮಾತುಗಳು ಮಾತ್ರ.

ಅಂದ್ಹಾಗೆ ಹಬ್ಬದ ಸಂದರ್ಭದಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತದೆ ಎನ್ನುವುದು ಸಾಮಾನ್ಯವಾಗಿ ತಲೆ ಇರುವ ಯಾವುದೇ ವ್ಯವಸ್ಥೆಗೆ ಗೊತ್ತಾಗಿರುತ್ತದೆ. ಏಕೆಂದರೆ ಬೆಂಗಳೂರಿನಂದಲೇ ನೂರಾರು ವಿಶೇಷ ಬಸ್‌ಗಳು ಶುಕ್ರವಾರದಿಂದ ಭಾನುವಾರದವರೆಗೆ ಬಂದಿವೆ. ಅದರಲ್ಲಿ ಬಿಎಂಟಿಸಿ ಬಸ್‌ಗಳು ಕೂಡ ಇದ್ದವು. ಪ್ರತಿ ಐದು ನಿಮಿಷಕ್ಕೊಮ್ಮೆ ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯಕ್ಕೆ ಬಸ್‌ ಕೂಡ ಬಿಡಲಾಗುತ್ತಿದೆ. ಸಾಮಾನ್ಯ ಜ್ಞಾನ ಇರುವ ಯಾವುದೇ ಆಡಳಿತ ವ್ಯವಸ್ಥೆಗೆ ಭಕ್ತರ ಸಂಖ್ಯೆ ಗಣನೀಯವಾಗಿ ಏರಲಿದೆ ಎನ್ನುವುದು ಕೂಡ ತಿಳಿದಿರುತ್ತದೆ. ಆದರೆ ದೇವಸ್ಥಾನದ ಸರ್ಕಾರಿ ಅಧಿಕಾರಿಗಳು ಮಾತ್ರ ಇದ್ಯಾವುದಕ್ಕೂ ತಯಾರಾಗಿಲ್ಲ. ಹಿಂದಿನ ದಿನ ರಾತ್ರಿ ಮಳೆ ಹೊಯ್ದ ಕಾರಣದಿಂದ ಕಂಬಳಿ, ರಗ್ಗು ಹೊದ್ದು ಚೆಂದವಾಗಿ ನಿದ್ದೆ ಮಾಡಿದ್ದಾರೆ. ಇತ್ತ ಭಕ್ತರು ದೇವಸ್ಥಾನಕ್ಕೆ ಬಂದು ಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾದರೂ, ಭದ್ರಾ ಸಿಬ್ಬಂದಿ ಬಿಟ್ಟು ಇನ್ಯಾರೂ ಆ ಕಡೆ ತಲೆ ಹಾಕಲೂ ಇಲ್ಲ.

ದೇವಸ್ಥಾನವೆಂದಾಕ್ಷಣ ಭಕ್ತರು ನಿರೀಕ್ಷಿಸುವ ವಿಚಾರಗಳಿವು

ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿ ಸಾಕಷ್ಟು ಆಂತರಿಕ ಕಿತ್ತಾಟ, ರಾಜಕೀಯಗಳಿವೆ. ಅದರ ಹೊರತಾಗಿಯೂ ಈ ರಾಜ್ಯದ ಶ್ರೀಮಂತ ದೇವಸ್ಥಾನದಿಂದ ಪ್ರತಿ ವರ್ಷ ೧೦೦ ಕೋಟಿ ರೂಪಾಯಿಗೂ ಅಧಿಕ ಆದಾಯ ಪಡೆಯುವ ರಾಜ್ಯ ಸರ್ಕಾರ, ಅಭಿವೃದ್ಧಿಗೆ ಬಿಡಿಗಾಸು ಖರ್ಚು ಮಾಡುವ ಲಕ್ಷಣ ಕಾಣಿಸುವುದಿಲ್ಲ. ದೇವಸ್ಥಾನವೆಂದಾಕ್ಷಣ ಭಕ್ತರು ಕೇವಲ ಮೂರು ವಿಚಾರಗಳನ್ನು ನಿರೀಕ್ಷಿಸುತ್ತಾರೆ.

೧. ಸುಲಭ ದರ್ಶನ ವ್ಯವಸ್ಥೆ

೨. ಉತ್ತಮ ಧಾರ್ಮಿಕ ಸೇವೆ

೩. ಶುಚಿ ರುಚಿಯಾದ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ

ಈ ರಾಜ್ಯದ ಶ್ರೀಮಂತ ದೇವಸ್ಥಾನವೆಂದು ಸುಮ್ಮನೇ ಸುಬ್ರಹ್ಮಣಕ್ಕೆ ಹಣೆಪಟ್ಟಿ ಬಂದಿಲ್ಲ. ವಾರ್ಷಿಕವಾಗಿ ಅತಿ ಹೆಚ್ಚು ಭಕ್ತರು ಬರುವ ಪ್ರದೇಶ ಎನ್ನುವ ಕಾರಣಕ್ಕಾಗಿಯೇ ನೂರಾರು ಕೋಟಿ ಹಣ ಹರಿದುಬರುತ್ತದೆ. ಹಾಗೆಯೇ ಧರ್ಮಸ್ಥಳಕ್ಕೆ ಹತ್ತಿರುವ ಇರುವ ಕಾರಣದಿಂದ ಭಕ್ತರ ಸಂಖ್ಯೆಯೂ ಹೆಚ್ಚಿರುತ್ತದೆ. ಆದರೆ ಅದಕ್ಕೆ ಪೂರಕವಾಗಿ ದೇವಸ್ಥಾನದ ಪ್ರಾಂಗಣ ಅಥವಾ ಹೊರಗೆ ವ್ಯವಸ್ಥೆ ಮಾಡಿಲ್ಲ. ಭಕ್ತರು ಸಾಮಾನ್ಯವಾಗಿ ಅಪೇಕ್ಷಿಸುವುದು ನೂಕು ನುಗ್ಗಲು ನಿಯಂತ್ರಿಸಲು ಉತ್ತಮವಾದ ಸಾಲಿನ ವ್ಯವಸ್ಥೆ. ದೇವಸ್ಥಾನದ ಪ್ರಾಂಗಣದೊಳಗೆ ಒಂದು ಸಾಲಿಗೆ ಹೊರತುಪಡಿಸಿದರೆ ಬೇರೆಲ್ಲೂ ಇದಕ್ಕೆ ಪೂರಕ ಮೂಲಸೌಕರ್ಯವನ್ನೇ ರಾಜ್ಯ ಸರ್ಕಾರ ಮಾಡಿಲ್ಲ. ಅಂದರೆ ಸುಮಾರು ೪೦೦-೫೦೦ ಭಕ್ತರನ್ನು ನಿಯಂತ್ರಿಸಬಹುದಾದ ವ್ಯವಸ್ಥೆಯಷ್ಟೇ ಇದೆ. ವಿಶೇಷ ಸಂದರ್ಭಗಳಿಗೆ ಅಲ್ಲಿಯ ಅಧಿಕಾರಿಗಳ ಬಳಿ ಪ್ಲ್ಯಾನ್‌ ಬಿ ಕೂಡ ಇಲ್ಲ. ಸಾಲಿನಲ್ಲಿ ನಿಂತವರಿಗೆ ಸುಸ್ತಾಗೆ ತಲೆ ಚಕ್ರ ಬಂದರೂ, ಕೂರಲು ಸಣ್ಣ ವ್ಯವಸ್ಥೆಯೂ ಇಲ್ಲ. ದೇವರನ್ನು ನೋಡಲು ಬಂದಿದ್ದೀರಿ, ದೇವರಿಗೆ ಬೇಕಿದ್ದರೆ ನಿಮ್ಮನ್ನು ರಕ್ಷಿಸುತ್ತಾನೆ ಎನ್ನುವುದು ನೂರಾರು ಕೋಟಿ ಉಣ್ಣುವ ಸರ್ಕಾರದ ಕಾಳಜಿಯಾಗಿದೆ. ವಿಶೇಷ ಸಂದರ್ಭಕ್ಕಾಗಿಯೇ ದೇವಸ್ಥಾನದ ಪ್ರವೇಶ ದ್ವಾರದಿಂದಲೇ ಒಳ್ಳೆಯ ಸಾಲುಗಳನ್ನು ಮಾಡುವ ಮೂಲ ಸೌಕರ್ಯಕ್ಕೆ ಬೇಕಾಗುವ ಒಂದಿಷ್ಟು ಲಕ್ಷವನ್ನು ಖರ್ಚು ಮಾಡಲು ಸಮಸ್ಯೆ ಏನು? ಅಂದ್ಹಾಗೆ ಈ ದೇವಸ್ಥಾನದ ಅಭಿವೃದ್ಧಿಗೆ ಬೇರೆಡೆಯಿಂದ ಹಣ ತರಬೇಕಿಲ್ಲ. ಅದೇನೋ ʼನಮ್ಮ ತೆರಿಗೆ ಹಕ್ಕುʼ ಎಂದು ಭಾಷಣ ಮಾಡುವವರು, ಇದೇ ಸುಬ್ರಹ್ಮಣ್ಯನ ಹುಂಡಿಗೆ ಜನರು ಹಾಕಿರುವ ದುಡ್ಡಿನ ಒಂದಂಶ ಹಣವನ್ನು ಖರ್ಚು ಮಾಡಿ ಅಭಿವೃದ್ಧಿ ಮಾಡಿದರೆ, ಭಕ್ತರು ಸುಬ್ರಹ್ಮಣ್ಯನ ಆಶೀರ್ವಾದವನ್ನು ಖುಷಿಯಿಂದ ಪಡೆದು, ಆಳುವ ಸರ್ಕಾರವನ್ನು ಹರಸಿ ಹೋಗುತ್ತಾರೆ. ಆದರೆ ಇಂದು ಶಪಿಸದೇ ಹೋಗಲು ಸಾಧ್ಯವಿಲ್ಲ.

ದೇವಾಲಯದ ಒಳಗೆ ಹೋದಾಗಲೂ ನಾವು ಪಡೆದ ಸೇವೆಗಳ ಚೀಟಿಯನ್ನು ಎಲ್ಲಿ ಕೊಡುವುದು, ಹೇಗೆ ಪೂಜೆ ಮಾಡಿಸುವುದು ಎನ್ನುವುದಕ್ಕೂ ಯಾರಿಂದಲೂ ಸರಿಯಾಗಿ ಉತ್ತರ ಸಿಗುವುದಿಲ್ಲ. ಒಳಗೆ ಬಂದಿರುವ ಜನರನ್ನು ನೂಕುವುದರಲ್ಲೇ ಅಲ್ಲಿಯ ಸಿಬ್ಬಂದಿ ನಿರತರಾಗಿರುತ್ತಾರೆಯಷ್ಟೇ. ಇದರ ಬದಲಾಗಿ ದೇವಾಲಯದೆಲ್ಲೆಡೆ ಒಳ್ಳೆಯ ಸೂಚನಾ ಫಲಕಗಳನ್ನು ಹಾಕಿ, ಭಕ್ತರಿಗೂ ಉಸಿರಾಡುವಂತ ವಾತಾವರಣ ಸೃಷ್ಟಿಸಿದರೆ ಜನರು ಖುಷಿಯಿಂದ ಆಡಳಿತ ವ್ಯವಸ್ಥೆಯನ್ನು ಹರಿಸಿ ಹೋಗುತ್ತಾರೆ.

ಕೊನೆಯದಾಗಿ: ಪ್ರತಿ ವರ್ಷ ನೂರಾರು ಕೋಟಿಯನ್ನು ಸುಬ್ರಹ್ಮಣ್ಯನ ಹೆಸರಲ್ಲಿ ಸಂಗ್ರಹಿಸಿ, ಅದನ್ನು ಸರಿಯಾಗಿ ವಿನಿಯೋಗಿಸದ ಆಡಳಿತ ವ್ಯವಸ್ಥೆಯನ್ನು ದೇವರು ಮೆಚ್ಚಲಾರ. ದೇವರನ್ನು ನಂಬದವರು ಆ ವ್ಯವಸ್ಥೆಯೊಳಗೆ ಒಂದಿಷ್ಟು ಸೇರಿಕೊಂಡಿರಬಹುದು. ಅವರನ್ನು ಪ್ರಜಾಪ್ರಭುತ್ವದ ದೇವರು ಕೂಡ ಕ್ಷಮಿಸಲಾರ. ದೇವರ ಹೆಸರಲ್ಲಿ ಮಾಡಿದ ದುಡ್ಡಿನ ಒಂದಿಷ್ಟು ಕಾಸನ್ನಾದರೂ ಅಲ್ಲಿಯೇ ಸರಿಯಾಗಿ ವಿನಿಯೋಗಿದವರನ್ನು ಹೇಗೆ ಕ್ಷಮಿಸಬೇಕು? ನಮ್ಮ ದೇವಾಲಯ ಕೂಡ ನಮ್ಮ ಹಕ್ಕು ಎನ್ನುವುದನ್ನು ಮರೆಯಬೇಡಿ.

Comments


ಹೆಚ್ಚು ಓದಿದ ಸುದ್ದಿ

Gold and Silver Prices | ಚಿನ್ನದ ದರ ₹1,550, ಬೆಳ್ಳಿ ₹3 ಸಾವಿರ ಇಳಿಕೆ

ಮಹಾರಾಜರ ಆಸ್ತಿ: ಖಾತೆ ಮಾಡಿಕೊಡಲು ಚಾಮರಾಜನಗರ ಡಿಸಿಗೆ ಪ್ರಮೋದಾದೇವಿ ಪತ್ರ

ವಕ್ಫ್ ಕಾಯ್ದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪೋಕ್ಸೊ ಪ್ರಕರಣ | ಬಿಎಸ್‌ವೈಗೆ ಅರಿವಿರಲಿಲ್ಲವೇ?: ಹೈಕೋರ್ಟ್‌

ಕ್ರೀಡೆ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬಾಗನ್‌ ಎದುರಾಳಿ

ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕಾಯಪಂಡ ತಂಡಕ್ಕೆ ರೋಚಕ ಗೆಲುವು

ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಷಿಪ್‌ ಇಂದಿನಿಂದ: ಸಿಂಧು,ಸೇನ್‌ ಮೇಲೆ ನಿರೀಕ್ಷೆ

IPL 2025 | ಇನ್ನೂ 10 ತಿಂಗಳು ಬಾಕಿ ಇವೆ: ಧೋನಿ

ಒಳನೋಟ

ಒಳನೋಟ | ಪ್ರತಿಸುಂಕ: ರಾಜ್ಯದಲ್ಲೂ ಕಂಪನ

ಒಳನೋಟ | ಅನ್ನದ ಬಟ್ಟಲಿಗೆ ಕನ್ನ...

ಒಳನೋಟ | ಆಹಾರ ಪಾರ್ಕ್: ಆಮೆ ನಡಿಗೆ

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಟ್ರೆಂಡಿಂಗ್

ಚಿನಕುರುಳಿ | ಸೋಮವಾರ, ಏಪ್ರಿಲ್ 07, 2025

PUC Results 2025: ಇಂದು ದ್ವಿತೀಯ ಪಿ.ಯು ಫಲಿತಾಂಶ ಪ್ರಕಟ

ಚುರುಮುರಿ: ಸುಭದ್ರ ಭವಿಷ್ಯ

ಹಂದಿಗಳ ಬಗ್ಗೆ ಮಾತನಾಡುವುದಿಲ್ಲ.. ಕಾಶಪ್ಪನವರ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

  • White Facebook Icon
bottom of page