ಸಾಲ ವಸೂಲಿಗೆ ನಿವೃತ್ತ ನೌಕರರ ಪೂರ್ಣ ಪಿಂಚಣಿ ಕಡಿತಗೊಳಿಸಬಾರದು: ಬ್ಯಾಂಕ್‌ಗೆ ಹೈಕೋರ್ಟ್ ಆದೇಶ
- Apr 8
- 1 min read
ನಿವೃತ್ತರಿಗೆ ಪಿಂಚಣಿ ಆರ್ಥಿಕ ಭದ್ರತೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ವಂಚನೆ, ನಕಲಿ ಅಥವಾ ದುಷ್ಕೃತ್ಯದ ಪ್ರಕರಣಗಳನ್ನು ಹೊರತುಪಡಿಸಿ, ಅದನ್ನು ಸಂಪೂರ್ಣವಾಗಿ ಸಾಲ ಮರುಪಾವತಿಗೆ ಬಳಸಿಕೊಳ್ಳಬಾರದು ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ಬೆಂಗಳೂರು: ಬಾಕಿ ಸಾಲವನ್ನು ವಸೂಲಿ ಮಾಡಲು ನಿವೃತ್ತ ಬ್ಯಾಂಕ್ ಉದ್ಯೋಗಿಯ ಪಿಂಚಣಿಯ ಶೇಕಡಾ 50 ಕ್ಕಿಂತ ಹೆಚ್ಚು ಕಡಿತಗೊಳಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಕೆನರಾ ಬ್ಯಾಂಕ್‌ಗೆ ನಿರ್ದೇಶನ ನೀಡಿದೆ.
ನಿವೃತ್ತರಿಗೆ ಪಿಂಚಣಿ ಆರ್ಥಿಕ ಭದ್ರತೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ವಂಚನೆ, ನಕಲಿ ಅಥವಾ ದುಷ್ಕೃತ್ಯದ ಪ್ರಕರಣಗಳನ್ನು ಹೊರತುಪಡಿಸಿ, ಅದನ್ನು ಸಂಪೂರ್ಣವಾಗಿ ಸಾಲ ಮರುಪಾವತಿಗೆ ಬಳಸಿಕೊಳ್ಳಬಾರದು ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ತೀರ್ಪು ನೀಡಿದ ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರು, ಬಾಕಿಗಳನ್ನು ವಸೂಲಿ ಮಾಡಲು ಬ್ಯಾಂಕುಗಳು ಕಾನೂನುಬದ್ಧ ಹಕ್ಕನ್ನು ಹೊಂದಿದ್ದರೂ, ಪಿಂಚಣಿದಾರರ ಜೀವನೋಪಾಯವನ್ನು ರಕ್ಷಿಸುವ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
ಪಿಂಚಣಿದಾರರ ಆರ್ಥಿಕ ಸ್ಥಿರತೆ ಅತ್ಯಗತ್ಯ ಮತ್ತು ಸಾಲ ಮರುಪಾವತಿಗಾಗಿ ಅವರ ಸಂಪೂರ್ಣ ಪಿಂಚಣಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯಿಸುವುದು ಭಾರತೀಯ ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸಬಹುದು ಎಂದ ಅವರು, ಇದು ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ ಎಂದರು.
ಕೇರಳದ ತ್ರಿಶೂರ್‌ನಲ್ಲಿ ವಾಸಿಸುತ್ತಿರುವ ನಿವೃತ್ತ ಕೆನರಾ ಬ್ಯಾಂಕ್ ಉದ್ಯೋಗಿಯಾಗಿರುವ 70 ವರ್ಷದ ಮುರುಗನ್ ಓ ಕೆ ಅವರು, ಬ್ಯಾಂಕ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು.
ಮುರುಗನ್ ನವೆಂಬರ್ 30, 2014 ರಂದು ನಿವೃತ್ತರಾಗಿದ್ದರು ಮತ್ತು ಅವರ ಪಿಂಚಣಿಯ ಒಂದು ಭಾಗವನ್ನು ಸಾಲದ ಇಎಂಐ ಆಗಿ ನಿರಂತರವಾಗಿ ಪಾವತಿಸುತ್ತಿದ್ದಾರೆ.
ಆದಾಗ್ಯೂ, ಜುಲೈ 2024 ರಿಂದ, ಕೆನರಾ ಬ್ಯಾಂಕ್ ಬಾಕಿ ಸಾಲಕ್ಕಾಗಿ ಅವರ ಸಂಪೂರ್ಣ ಪಿಂಚಣಿಯನ್ನು ಕಡಿತಗೊಳಿಸಲು ಪ್ರಾರಂಭಿಸಿತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಮುರುಗನ್ ಅವರು 8.5 ಲಕ್ಷ ರೂ. ಸಾಲ ಬಾಕಿ ಉಳಿಸಿಕೊಂಡಿದ್ದು, ಬಾಕಿ ಮೊತ್ತವನ್ನು ವಸೂಲಿ ಮಾಡುವುದು ತನ್ನ ಹಕ್ಕು ಎಂದು ಕೆನರಾ ಬ್ಯಾಂಕ್ ವಾದಿಸಿತು.
ಆದಾಗ್ಯೂ, ಸಾಲ ವಸೂಲಾತಿಗಾಗಿ ಬ್ಯಾಂಕ್ ಅವರ ಪಿಂಚಣಿಯ ಶೇಕಡಾ 50 ರಷ್ಟು ಹಣವನ್ನು ಮಾತ್ರ ಕಡಿತಗೊಳಿಸಬಹುದು ಎಂದು ನ್ಯಾಯಾಲಯವು ತೀರ್ಪು ನೀಡಿದೆ.
Comments