ಸುವರ್ಣಸೌಧದಲ್ಲಿ ಹಲ್ಲೆ ಯತ್ನ ಪ್ರಕರಣ: ಸಿಟಿ ರವಿ ಹೇಳಿಕೆ ದಾಖಲಿಸಿಕೊಂಡ ಸಿಐಡಿ
- Apr 8
- 1 min read
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ವಿಧಾನ ಪರಿಷತ್ತಿನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಆಕ್ರೋಶಗೊಂಡ ಜನರ ಗುಂಪೊಂದು ಎಂಎಲ್‌ಸಿ ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿತ್ತು.

ಬೆಂಗಳೂರು: ಬಿಜೆಪಿ ನಾಯಕ ಸಿ ಟಿ ರವಿ ಅವರು ಡಿಸೆಂಬರ್ 19 ರಂದು ಬೆಳಗಾವಿ ವಿಧಾನಮಂಡಲ ಅಧಿವೇಶನದ ಕೊನೆಯ ದಿನ ಸುವರ್ಣಸೌಧದಲ್ಲಿ ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣ ಸಂಬಂಧ ಗುರುವಾರ ಸಿಐಡಿ ಅಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ವಿಧಾನ ಪರಿಷತ್ತಿನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಆಕ್ರೋಶಗೊಂಡ ಜನರ ಗುಂಪೊಂದು ಎಂಎಲ್‌ಸಿ ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿತ್ತು.
ಸಿಐಡಿ ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಟಿ ರವಿ ಅವರು, ನನ್ನ ಮೇಲಿನ ಹಲ್ಲೆ ಸಂಬಂಧ ಸಭಾಪತಿಗೆ ದೂರು ಕೊಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಲು ಸಭಾಪತಿ ಸೂಚಿಸಿದ್ದರು. ಸುವರ್ಣಸೌಧದ ಪಶ್ಚಿಮದ್ವಾರದ ಸಮೀಪ ಹಲ್ಲೆಗೆ ಯತ್ನಿಸಿದ್ದರು. ಪರಿಷತ್ ಸಭಾಂಗಣಕ್ಕೆ ತೆರಳುವಾಗ ಮತ್ತೆ ಹಲ್ಲೆಗೆ ಮುಂದಾಗಿದ್ದರು. ಈ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದರು.
"ನನ್ನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳು, ಅವರು ಕೂಗಿದ ಘೋಷಣೆಗಳು ಮತ್ತು ಅವರು ಬಳಸಿದ ಅಸಭ್ಯ ಭಾಷೆಯ ಬಗ್ಗೆ ನಾನು ನನ್ನ ಹೇಳಿಕೆಯನ್ನು ದಾಖಲಿಸಿದ್ದೇನೆ" ಎಂದು ಬಿಜೆಪಿ ನಾಯಕ ಸಿಐಡಿ ಕಚೇರಿಯಿಂದ ಹಿಂದಿರುಗಿದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಡಿಸೆಂಬರ್ 19 ರಂದು ಬೆಳಗಾವಿಯ ಸುವರ್ಣ ವಿಧಾನಸೌಧ ಆವರಣದಲ್ಲಿ ತಮ್ಮ ಮೇಲೆ ಎರಡು ಬಾರಿ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ತನಿಖೆಯ ಭಾಗವಾಗಿ ಘಟನೆಯ ವಿಡಿಯೋ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುವುದು ಎಂದು ಸಿಟಿ ರವಿ ತಿಳಿಸಿದ್ದಾರೆ.

Comments