ಚೀನಾಗೆ ಸಿಕ್ಕಿದೆ ಮುಗಿಯದ ಖನಿಜ ಬಂಡಾರ: 60,000 ವರ್ಷ ವಿದ್ಯುತ್ ಸಮಸ್ಯೆ ತಲೆಧೋರಲ್ಲ!
- Apr 8
- 1 min read
ಚೀನಾ ತನ್ನ ಇಂಧನ ಅಗತ್ಯಗಳನ್ನು ಶಾಶ್ವತವಾಗಿ ಪೂರೈಸಿಕೊಳ್ಳಬಹುದಾದ ಬೃಹತ್ ನಿಧಿಯನ್ನು ಹೊಂದಿದೆ. ಚೀನಾದಲ್ಲಿ ನಡೆದ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, ಚೀನಾವು ಅಪಾರ ಪ್ರಮಾಣದ ಥೋರಿಯಂ ನಿಕ್ಷೇಪಗಳನ್ನು ಹೊಂದಿದೆ.

ಬೀಜಿಂಗ್: ಚೀನಾ ತನ್ನ ಇಂಧನ ಅಗತ್ಯಗಳನ್ನು ಶಾಶ್ವತವಾಗಿ ಪೂರೈಸಿಕೊಳ್ಳಬಹುದಾದ ಬೃಹತ್ ನಿಧಿಯನ್ನು ಹೊಂದಿದೆ. ಚೀನಾದಲ್ಲಿ ನಡೆದ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, ಚೀನಾವು ಅಪಾರ ಪ್ರಮಾಣದ ಥೋರಿಯಂ ನಿಕ್ಷೇಪಗಳನ್ನು ಹೊಂದಿದೆ. ಈ ವಿಕಿರಣಶೀಲ ಲೋಹವು ಜಾಗತಿಕ ಇಂಧನ ಉತ್ಪಾದನೆಯಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ. ಅಲ್ಲದೆ ಪಳೆಯುಳಿಕೆ ಇಂಧನಗಳ ಮೇಲಿನ ಪ್ರಪಂಚದ ಅವಲಂಬನೆಯನ್ನು ಕೊನೆಗೊಳಿಸುತ್ತದೆ ಎಂದು ತಜ್ಞರೊಬ್ಬರು ಹೇಳಿದ್ದನ್ನು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಉಲ್ಲೇಖಿಸಿದೆ.
ಚೀನಾ ಈಗಾಗಲೇ ದೊಡ್ಡ ಪ್ರಮಾಣದ ಥೋರಿಯಂ ನಿಕ್ಷೇಪಗಳನ್ನು ಹೊಂದಿದೆ. ಆದಾಗ್ಯೂ, 2020ರಲ್ಲಿ ನಡೆಸಿದ ಸಮೀಕ್ಷೆಯ ವರ್ಗೀಕೃತ ವರದಿಯ ಪ್ರಕಾರ, ಇದು ವಾಸ್ತವವಾಗಿ ಹಿಂದಿನ ಅಂದಾಜುಗಳಿಗಿಂತ ಹಲವು ಪಟ್ಟು ಹೆಚ್ಚಾಗಿರಬಹುದು. ಇನ್ನರ್ ಮಂಗೋಲಿಯಾದ ಕಬ್ಬಿಣದ ಅದಿರಿನ ಸ್ಥಳದಿಂದ ಕೇವಲ ಐದು ವರ್ಷಗಳ ಗಣಿಗಾರಿಕೆ ತ್ಯಾಜ್ಯವು 1,000 ವರ್ಷಗಳಿಗೂ ಹೆಚ್ಚು ಕಾಲ ಅಮೆರಿಕದ ದೇಶೀಯ ಇಂಧನ ಬೇಡಿಕೆಗಳನ್ನು ಪೂರೈಸುವಷ್ಟು ಥೋರಿಯಂ ಅನ್ನು ಹೊಂದಿದೆ ಎಂದು ಜನವರಿಯಲ್ಲಿ ಚೀನಾದ ಜರ್ನಲ್ ಜಿಯೋಲಾಜಿಕಲ್ ರಿವ್ಯೂನಲ್ಲಿ ಪ್ರಕಟವಾದ ವರದಿಯೊಂದು ತಿಳಿಸಿದೆ.
ಕೆಲವು ತಜ್ಞರ ಅಂದಾಜಿನ ಪ್ರಕಾರ, ಈ ನಿಧಿಯನ್ನು ಸಂಪೂರ್ಣವಾಗಿ ಬಳಸಿಕೊಂಡಾಗ, ಬಯಾನ್ ಒಬೊ ಗಣಿ ಸಂಕೀರ್ಣವು ಒಂದು ಮಿಲಿಯನ್ ಟನ್ ಥೋರಿಯಂ ಅನ್ನು ಉತ್ಪಾದಿಸಬಹುದು. ಇದು ಚೀನಾಕ್ಕೆ 60,000 ವರ್ಷಗಳ ಕಾಲ ಇಂಧನ ನೀಡಲು ಸಾಕಾಗುತ್ತದೆ. ನಮ್ಮ ಪಾದಗಳ ಕೆಳಗೆ ಅಂತ್ಯವಿಲ್ಲದ ಇಂಧನ ಮೂಲಗಳು ಅಡಗಿವೆ ಎಂದು ತಿಳಿದುಬಂದಿದೆ ಎಂದು ಹೆಸರು ಹೇಳಲು ಇಚ್ಛಿಸದ ಬೀಜಿಂಗ್ ಮೂಲದ ಭೂವಿಜ್ಞಾನಿಯೊಬ್ಬರು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ಗೆ ತಿಳಿಸಿದ್ದಾರೆ.
ಥೋರಿಯಂ ಬೆಳ್ಳಿ ಬಣ್ಣದ ಲೋಹವಾಗಿದ್ದು, ಹಳೆಯ ಸ್ಕ್ಯಾಂಡಿನೇವಿಯನ್ ದೇವರು ಥಾರ್ ಅವರ ಹೆಸರನ್ನು ಇಡಲಾಗಿದೆ. ಇದು ಯುರೇನಿಯಂಗಿಂತ 200 ಪಟ್ಟು ಹೆಚ್ಚು ಶಕ್ತಿಯನ್ನು ಉತ್ಪಾದಿಸುತ್ತದೆ. ಯುರೇನಿಯಂ ರಿಯಾಕ್ಟರ್‌ಗಳಿಗಿಂತ ಭಿನ್ನವಾಗಿ, ಥೋರಿಯಂ ಕರಗಿದ-ಉಪ್ಪು ರಿಯಾಕ್ಟರ್‌ಗಳು (TMSR) ಚಿಕ್ಕದಾಗಿರುತ್ತವೆ. ಅವು ಕರಗಲು ಸಾಧ್ಯವಿಲ್ಲ ಮತ್ತು ನೀರಿನಿಂದ ತಂಪಾಗಿಸುವ ಅಗತ್ಯವಿಲ್ಲ. ಇದಲ್ಲದೆ ಅವು ಕಡಿಮೆ ಪ್ರಮಾಣದ ವಿಕಿರಣಶೀಲ ತ್ಯಾಜ್ಯವನ್ನು ಬಿಡುಗಡೆ ಮಾಡುತ್ತವೆ.
ಕಳೆದ ವರ್ಷ, ಗೋಬಿ ಮರುಭೂಮಿಯಲ್ಲಿ ವಿಶ್ವದ ಮೊದಲ ಟಿಎಂಎಸ್ಆರ್ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಚೀನಾ ಅನುಮೋದನೆ ನೀಡಿತು. 10 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿರುವ ಈ ಪೈಲಟ್ ಯೋಜನೆಯು 2029ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಸಮೀಕ್ಷೆಯ ಪ್ರಕಾರ, ಚೀನಾದಾದ್ಯಂತ 233 ಥೋರಿಯಂ-ಸಮೃದ್ಧ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅವು ಐದು ಪ್ರಮುಖ ಪಟ್ಟಿಗಳಲ್ಲಿವೆ. ಅಪರೂಪದ ಭೂಮಿಯ ಅದಿರುಗಳಿಂದ ಥೋರಿಯಂ ಅನ್ನು ಬೇರ್ಪಡಿಸಲು ಅಪಾರ ಪ್ರಮಾಣದ ಆಮ್ಲ ಮತ್ತು ಶಕ್ತಿಯ ಅಗತ್ಯವಿರುತ್ತದೆ. 1 ಗ್ರಾಂ ಥೋರಿಯಂ ಅನ್ನು ಶುದ್ಧೀಕರಿಸಲು ಸುಮಾರು ನೂರಾರು ಟನ್ ನೀರು ಬೇಕಾಗುತ್ತದೆ.
Comments